ಪೌರಕಾರ್ಮಿಕರ ಶ್ರಮದಿಂದ ನಗರಗಳು ಸ್ವಚ್ಛ: ಉಡುಪಿ ಜಿಲ್ಲಾಧಿಕಾರಿ

Update: 2020-09-23 14:12 GMT

ಉಡುಪಿ, ಸೆ.23: ನಗರವನ್ನು ಸ್ವಚ್ಛವಾಗಿರಿಸುವಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಪೌರಕಾರ್ಮಿಕರ ಕೊಡುಗೆ ಅಪಾರ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಬುಧವಾರ ಅಜ್ಜರಕಾಡಿನ ಪುರಭವನದ ಮಿನಿ ಸಭಾಂಗಣದಲ್ಲಿ ನಗರಸಭೆಯ ವತಿಯಿಂದ ನಡೆದ ಪೌರ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ, ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡುತಿದ್ದರು.

ಪೌರ ಕಾರ್ಮಿಕರಿಲ್ಲದೆ ನಗರ ಸ್ವಚ್ಛವಾಗಿರಿಸಲು ಸಾಧ್ಯವೇ ಇಲ್ಲ. ಉಡುಪಿ ಜಿಲ್ಲೆಯು ಸ್ವಚ್ಛ ಸರ್ವೆಕ್ಷಣ ಸ್ವಚ್ಛತಾ ರ್ಯಾಂಕಿಂಗ್‌ನಲ್ಲಿ ರಾಜ್ಯದಲ್ಲಿ 9ನೇ ಸ್ಥಾನದಲ್ಲಿದ್ದು, ಮುಂದಿನ ವರ್ಷ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಆಶಯವಿದೆ ಎಂದರು.

ಕೋವಿಡ್ ಸಂದರ್ಭದಲ್ಲೂ ಉಡುಪಿ ಪೌರಕಾರ್ಮಿಕರ ಸೇವೆಯೂ ಅನುಪಮವಾಗಿದ್ದು, ಕೋವಿಡ್‌ನಿಂತ ಸತ್ತವರ ಶವಸಂಸ್ಕಾರ ಮಾಡಲು ಧೈರ್ಯದಿಂದ ಮುಂದೆ ಬಂದು, ಅಲ್ಲಿಯೂ ತಮ್ಮ ಸೇವೆಯನ್ನು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ನುಡಿದರು.

ಪೌರ ಕಾರ್ಮಿಕರು ವೈಯಕ್ತಿಕ ಸ್ವಚ್ಛತೆಗೂ ಆದ್ಯತೆಯನ್ನು ನೀಡಬೇಕು. ನಗರದ ಸ್ವಚ್ಛತೆ ಮಾಡುವ ಮುನ್ನ ತಮ್ಮ ಆರೋಗ್ಯದತ್ತ ಗಮನ ಹರಿಸಬೇಕು. ಸ್ವಚ್ಛತೆ ಮಾಡುವಾಗ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡು ಕೆಲಸಕ್ಕೆ ತೆರಳುವಾಗ ಕೈ ಕವಚ ಹಾಗೂ ಇನ್ನಿತರ ಅಗತ್ಯ ರಕ್ಷಣಾ ಕವಚಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಯನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. ಪೌರ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಉತ್ತಮ ಸೇವೆ ನೀಡುತ್ತಿರುವ ಪೌರಕಾರ್ಮಿಕರನ್ನು ಹಾಗೂ ನೈರ್ಮಲ್ಯ ಮೇಲ್ವಿಚಾರಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‌ರಾಜ್, ಆರೋಗ್ಯ ನಿರೀಕ್ಷಕ ಕರುಣಾಕರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News