ಸಂತ ಅಲೋಶಿಯಸ್ ಕಾಲೇಜು ರಸ್ತೆಯ ಹೆಸರು ಬದಲಾವಣೆ ನಿರ್ಧಾರ ಕೈ ಬಿಡಬೇಕು : ವಂ. ಮೆಲ್ವಿನ್ ಜೋಸೆಫ್ ಪಿಂಟೋ

Update: 2020-09-23 14:44 GMT

ಮಂಗಳೂರು, ಸೆ .23: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹಂಪನಕಟ್ಟೆಯಿಂದ ತೊಡಗಿ ಲೈಟ್ ಹೌಸ್ ಮೂಲಕ ಸಾಗಿ ಅಂಬೇಡ್ಕರ್ ವ್ರತ್ತದವರೆಗಿನ ‘ಸಂತ ಅಲೋಶಿಯಸ್ ಕಾಲೇಜು ರಸ್ತೆ ’ಯನ್ನು ‘ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ’ ಎಂದು ಏಕಾಏಕಿ ಮರು ನಾಮಕರಣ ಮಾಡಿರುವುದು ಅತ್ಯಂತ ಖೇದಕರ ಬೆಳವಣಿಗೆ ಯಾಗಿದೆ ಎಂದು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಮೆಲ್ವಿನ್ ಜೋಸೆ ಫ್ ಪಿಂಟೋ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ 1976ರಲ್ಲಿ ಆಗಿನ ನಗರ ಸಭೆಯ ಅಧ್ಯಕ್ಷ ಬ್ಲೇಸಿಯಸ್ ಡಿ ಸೋಜ ಅವರ ಅಧ್ಯಕ್ಷತೆಯಲ್ಲಿ ಈ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ನಾಮಕರಣ ಮಾಡಿ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿಗೆ ಗೌರವ ಸೂಚಿತ್ತು. ಇದೀಗ ಅದೇ ಸ್ಥಳೀಯಾಡಳಿತ ಸಂಸ್ಥೆ ಹಿಂದಿನ ದಾಖಲೆಗಳನ್ನು, ಸಾರ್ವಜನಿಕರ ಅಭಿಪ್ರಾಯಗಳನ್ನು ,ಸಂತ ಅಲೋಶಿಯಸ್ ಕಾಲೇಜಿನ ಅಭಿಪ್ರಾಯ ವನ್ನು ಪರಿಗಣಿಸದೆ 140 ವರ್ಷಗಳ ಹಿಂದಿನಿಂದ ಶೈಕ್ಷಣಿಕ ಕೊಡುಗೆ ನೀಡುತ್ತಾ ಸಾಕಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿರುವ ಸಂಸ್ಥೆಯ ಹೆಸರನ್ನು ತೆಗೆದು ಹಾಕಿ ಅವಮಾನಿಸಿದಂತಾಗಿದೆ. ಮುಲ್ಕಿ ಸುಂದರಾಮ ಶೆಟ್ಟಿಯವರು ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಕರಾವಳಿಯ ಪ್ರಮುಖ ವ್ಯಕ್ತಿಗಳಾದ ಟಿ.ಎಂ.ಎ.ಪೈ,ಜಾರ್ಜ್ ಫೆರ್ನಾಂಢೀಸ್, ಕೆ.ವೇಣು ಗೋಪಾಲ್, ಜಸ್ಟಿಸ್ ಸಂತೋಷ್ ಹೆಗ್ಡೆ, ವಿನಯ ಹೆಗ್ಡೆ,ಕೆ.ವಿ.ಕಾಮತ್, ಡಾ. ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬಹುಮುಖಿ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಂದಿರುವ ಕೊಡು ಕೊಳ್ಳುತ್ತಾ ಬಾಳಿ ಬದುಕುತ್ತಾ ಬಂದಿರುವ ಜನ ಸಮುದಾಯ, ಸಾಂಸ್ಕೃತಿಕ ಸೌಹಾರ್ದತೆ ಈ ಜಿಲ್ಲೆಯ ಅನನ್ಯತೆ. ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ ಈ ನೆಲದ ಗಟ್ಟಿ ತತ್ವವಾಗಿದೆ.ಇಂತಹ ಸಾಂಸ್ಕೃತಿಕ ಇತಿಹಾಸವಿರುವ ಜಿಲ್ಲೆಯ ಸೌಹಾರ್ದ ಪರಂಪರೆಗೆ ಸರಕಾರದ ಏಕ ಪಕ್ಷೀಯ ನೀತಿಯಿಂದ ಹಾನಿಯಾಗಿದೆ. ಸರಕಾರದ ಆದೇಶದಿಂದ ನಮಗೆ ಆಘಾತವಾಗಿದೆ ಎಂದು ರೆಕ್ಟರ್ ತಿಳಿಸಿದ್ದಾರೆ.

ಜನರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇರುವ ಸಂದರ್ಭದಲ್ಲಿ ಸರಕಾರ ಪ್ರಜೆಗಳ ಆಶೋತ್ತರಗಳ ಈಡೇರಿಕೆಗಾಗಿ ಮತ್ತು ವಿಭಿನ್ನ ಜನ ಸಮುದಾಯಗಳ ಭಾವನೆಗಳನ್ನು ಗೌರವಿಸುವ ನೆಲೆಯಲ್ಲಿ ಮರು ನಾಮಕರಣದ ಕಾರ್ಯತಂತ್ರವನ್ನು ಕೈ ಬಿಟ್ಟು ಜಿಲ್ಲೆಯ ನಾಗರಿಕರಿಗೆ ಸಾಮಾಜಿಕ ನ್ಯಾಯ ಮತ್ತು ಶಾಂತಿಯುತ ಬದುಕನ್ನು ಕಟ್ಟಿಕೊಳ್ಳುವ ವಾತವರಣವನ್ನು ನಿರ್ಮಿಸಿಕೊಡುವಂತೆ ವಿನಂತಿ ಮಾಡುವುದಾಗಿ ರೆಕ್ಟರ್ ಮೆಲ್ವಿನ್ ಜೋಸೆಫ್ ಪಿಂಟೋ ತಿಳಿಸಿದ್ದಾರೆ.

ಮುಲ್ಕಿ ಸುಂದರಾಮ ಶೆಟ್ಟಿಯವರು ವಿಜಯ ಬ್ಯಾಂಕ್‌ನ ಮೂಲಕ ಜಿಲ್ಲೆಯ ಸಾಕಷ್ಟು ಜನರಿಗೆ ನೆರವು ನೀಡಲು ಕಾರಣರಾದ ಮಹಾನ್ ವ್ಯಕ್ತಿ. ಅವರ ಹೆಸರನ್ನು ಮಂಗಳೂರಿನ ಯಾವೂದಾದರೂ ರಸ್ತೆಯೊಂದಕ್ಕೆ ಇಡಬೇಕು ಎನ್ನುವುದು ವಿಜಯ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಸಂಘಟನೆಯ ಬೇಡಿಕೆಯಾಗಿತ್ತು. ವಿಜಯ ಬ್ಯಾಂಕ್‌ನ ಮೊದಲ ಕಚೇರಿ ಇದ್ದ ಬಂಟ್ಸ್ ಹಾಸ್ಟೆಲ್-ಮಲ್ಲಿಕಟ್ಟೆ ರಸ್ತೆಗೆ ಅಥವಾ ಇನ್ನೂ ಹೆಸರು ಇಡದೇ ಇರುವ ರಸ್ತೆಗೆ ಅವರ ಹೆಸರನ್ನು ಇಡುವುದು ಅವರಿಗೆ ಸೂಚಿಸುವ ಗೌರವವಾಗಿತ್ತು. ಹೊರತು ಅವರು ಕಲಿತ ಶಿಕ್ಷಣ ಸಂಸ್ಥೆಯ ಹೆಸರನ್ನು ಬದಲಾಯಿಸಿ ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ಎಂದು ಬದಲಾಯಿಸುವುದು ಅವರಿಗೆ ನೀಡುವ ವಗೌರವ ಅಲ್ಲ. ಬದದಲಾಗಿ ಅವರು ಕಲಿತ ಸಂಸ್ಥೆಗೆ ಅವರ ಹೆಸರಿನಲ್ಲಿ ಮಾಡುವ ಅವಮಾನವಾಗುತ್ತದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಎನ್.ಜಿ.ಮೋಹನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ರಿಜಿಸ್ಟಾರ್ ಡಾ.ಅಲ್ವಿನ್ ಡೇಸಾ, ಪ್ರಭಾರ ಪ್ರಾಂಶುಪಾಲ ಡಾ.ಡೆನ್ನಿಸ್ ಫೆರ್ನಾಂಡೀಸ್, ವಿವಿಧ ಶೈಕ್ಷಣಿಕ ವಿಭಾಗಗಳ ನಿರ್ದೇಶಕರಾದ ಡಾ.ರಿಚರ್ಡ್ ಗೋನ್ಸಾಲ್ವೀಸ್, ಡಾ. ಲವೀನಾ ಲೋಬೊ, ಡಾ.ನೋಬರ್ಟ್ ಲೋಬೊ, ಡಾ.ಜೋಹನ್ ಇ.ಡಿ.ಸಿಲ್ವ, ಹಳೆ ವಿದ್ಯಾರ್ಥಿ ಸಂತೋಷ್ ಕುಮಾರ್ ಕದ್ರಿ, ವಿದ್ಯಾರ್ಥಿ ಸಂಘದ ನಾಯಕ ಗೆವಿನ್ ಅಬ್ನಿರ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News