ವಿಶ್ವಸಂಸ್ಥೆಯಲ್ಲಿ ಟರ್ಕಿ ಅಧ್ಯಕ್ಷರಿಂದ ಕಾಶ್ಮೀರ ವಿವಾದ ಪ್ರಸ್ತಾಪ ಸಂಪೂರ್ಣ ಅಸ್ವೀಕಾರಾರ್ಹ: ಭಾರತ

Update: 2020-09-23 15:03 GMT
ಟರ್ಕಿ ಅಧ್ಯಕ್ಷ - ರಿಸೆಪ್ ತಯ್ಯಿಪ್ ಎರ್ದೊಗಾನ್

ನ್ಯೂಯಾರ್ಕ್, ಸೆ. 23: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆಗಳಿಗಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರನ್ನು ಭಾರತ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಅವರ ಹೇಳಿಕೆಗಳು ಭಾರತದ ಆಂತರಿಕ ವ್ಯವಹಾರದಲ್ಲಿ ನಡೆಸಲಾದ ಹಸ್ತಕ್ಷೇಪವಾಗಿದೆ ಹಾಗೂ ಅವುಗಳು ಸಂಪೂರ್ಣ ಅಸ್ವೀಕಾರಾರ್ಹವಾಗಿವೆ ಎಂದು ಭಾರತ ಹೇಳಿದೆ.

ಇತರ ದೇಶಗಳ ಸಾರ್ವಭೌಮತೆಯನ್ನು ಗೌರವಿಸಲು ಟರ್ಕಿಯು ಕಲಿಯಬೇಕು ಹಾಗೂ ತನ್ನ ನೀತಿಗಳ ಬಗ್ಗೆ ಅದು ಹೆಚ್ಚು ಗಮನಹರಿಸಬೇಕು ಎಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎರ್ದೊಗಾನ್ ಕಾಶ್ಮೀರ ವಿಷಯವನ್ನು ಕೆದಕಿದ ಗಂಟೆಗಳ ಬಳಿಕ ಟ್ವೀಟ್ ಮಾಡಿದ ಭಾರತದ ವಿಶ್ವಸಂಸ್ಥೆ ರಾಯಭಾರಿ ಟಿ.ಎಸ್. ತಿರುಮೂರ್ತಿ ಹೇಳಿದರು.

‘‘ಭಾರತದ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಟರ್ಕಿ ಅಧ್ಯಕ್ಷರು ನೀಡಿರುವ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಅವರ ಹೇಳಿಕೆಗಳು ಭಾರತದ ಆಂತರಿಕ ವ್ಯವಹಾರದಲ್ಲಿ ಮಾಡಿರುವ ತೀವ್ರ ಹಸ್ತಕ್ಷೇಪವಾಗಿದೆ ಹಾಗೂ ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿವೆ’’ ಎಂದು ತಿರುಮೂರ್ತಿ ಟ್ವೀಟ್ ಮಾಡಿದರು.

‘‘ಕಾಶ್ಮೀರ ಸಂಘರ್ಷವು ಈಗಲೂ ಜ್ವಲಂತ ವಿಷಯವಾಗಿದೆ ಹಾಗೂ ದಕ್ಷಿಣ ಏಶ್ಯದ ಸ್ಥಿರತೆ ಮತ್ತು ಶಾಂತಿಯಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸುತ್ತದೆ’’ ಎಂಬುದಾಗಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಟರ್ಕಿ ಅಧ್ಯಕ್ಷರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News