ಬರ್ಲಿನ್ ಆಸ್ಪತ್ರೆಯಿಂದ ಪುಟಿನ್ ಟೀಕಾಕಾರ ಬಿಡುಗಡೆ

Update: 2020-09-23 14:49 GMT

ಬರ್ಲಿನ್ (ಜರ್ಮನಿ), ಸೆ. 23: ವಿಷಪ್ರಾಶನಕ್ಕೆ ಒಳಗಾಗಿದ್ದಾರೆ ಎಂಬುದಾಗಿ ಶಂಕಿಸಲಾಗಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯನ್ನು ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದ ಒಂದು ತಿಂಗಳಿಗೂ ಅಧಿಕ ಚಿಕಿತ್ಸೆಯ ಬಳಿಕ ಬಿಡುಗಡೆ ಮಾಡಲಾಗಿದೆ.

‘‘ರೋಗಿಯ ಪ್ರಗತಿ ಮತ್ತು ಪ್ರಸಕ್ತ ಸ್ಥಿತಿಯ ಆಧಾರದಲ್ಲಿ, ಅವರ ಸಂಪೂರ್ಣ ಚೇತರಿಕೆ ಸಾಧ್ಯ ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಭಾವಿಸಿದ್ದಾರೆ’’ ಎಂದು ಹೇಳಿಕೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವ ಚಾರಿಟಿ ಹಾಸ್ಪಿಟಲ್ ತಿಳಿಸಿದೆ. ಆದರೆ, ವಿಷಪ್ರಾಶನದ ದೀರ್ಘಾವಧಿ ಪರಿಣಾಮಗಳನ್ನು ಈಗಲೇ ಅಂದಾಜಿಸುವುದು ಅಸಾಧ್ಯ ಎಂದು ಅದು ಹೇಳಿದೆ.

ಕಳೆದ ತಿಂಗಳು ರಶ್ಯದ ಸೈಬೀರಿಯದಲ್ಲಿ ರಶ್ಯಕ್ಕೆ ಹೋಗುವ ವಿಮಾನವೊಂದನ್ನು ಹತ್ತಿದ ಬಳಿಕ, 44 ವರ್ಷದ ನವಾಲ್ನಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅವರು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ತೀವ್ರ ಟೀಕಾಕಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News