ಸಂಚಾರಕ್ಕೆ ಅಯೋಗ್ಯವಾದ ಸಜಿಪ ಮೂಡ ಕೋಮಾಲಿ ರಸ್ತೆ

Update: 2020-09-23 17:46 GMT

ಬಂಟ್ವಾಳ, ಸೆ. 23: ತಾಲೂಕಿನ ಸಜಿಪ ಮೂಡ ಗ್ರಾಮದ ಬೊಳ್ಳಾಯಿ, ಮಂಚಿ, ಕಲ್ಲಡ್ಕ ಅಮ್ಟೂರು ಸಂಪರ್ಕ ಕಲ್ಪಿಸುವ ರಸ್ತೆಯ ಕೋಮಾಲಿ ಎಂಬಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ತೀರ ಅಯೋಗ್ಯವಾಗಿದೆ.

ಬೊಳ್ಳಾಯಿಯಿಂದ ಕೋಮಾಲಿ ವರೆಗೆ ಡಾಂಬರು ರಸ್ತೆ ಇದೆ. ಕೋಮಾಲಿಯಲ್ಲಿ ರಸ್ತೆ ಬದಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲದೆ ಎಪ್ರಿಲ್ ತಿಂಗಳಲ್ಲಿ ಇಲ್ಲಿನ ರಸ್ತೆಗೆ ಮಣ್ಣು ಹಾಕಿ ಎತ್ತರಗೊಳಿಸಲಾಗಿತ್ತು. ಮಳೆಗಾಲ ಆರಂಭದಲ್ಲೇ ರಸ್ತೆ ಕೆಸರುಮಯಗೊಂಡಿದ್ದು ಪ್ರಸಕ್ತ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನಗಳ ಸಂಚಾರ ಸಂಪೂರ್ಣ ನಿಂತಿದೆ. ಜನರ ಸಂಚಾರ ಕೂಡಾ ಕಷ್ಟಕರವಾಗಿದೆ.

ರಸ್ತೆಗೆ ತಾಗಿಕೊಂಡು ಆಳವಾದ ಚರಂಡಿ ನಿರ್ಮಾಣ ಮಾಡಲಾಗಿದೆ. ಚರಂಡಿಯಲ್ಲಿ ಮಳೆ ನೀರು ತುಂಬಿ ರಸ್ತೆಯಲ್ಲೇ ಹರಿಯುತ್ತಿದೆ. ಒಂದೆಡೆ ಚರಂಡಿ ನೀರು ಹರಿಯಳೆಂದು ಸಿಮೆಂಟ್ ಕೊಳವೆಯೊಂದನ್ನು ಅಳವಡಿಸಿದ್ದರೂ ಕೊಳವೆ ಚರಂಡಿಗಿಂತ ಎತ್ತರದಲ್ಲಿ ಇದೆ. ಈ ಕೊಳವೆಯನ್ನು ಅಳವಡಿಸಿಯೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಇನ್ನೊಂದೆಡೆ ಅಳವಡಿಸಿರುವ ಕೊಳವೆಯಿಂದ ಮತ್ತೊಂದು ರಸ್ತೆ ಮತ್ತು ಕಿರು ಸೇತುವೆಯೊಂದು ಹಾನಿಗೊಳ್ಳುವ ಅಪಾಯವನ್ನು ಎದುರಿಸುತ್ತಿದೆ.

ಸುಮಾರು ನೂರಕ್ಕೂ ಅಧಿಕ ಮನೆಗಳು ಈ ಭಾಗದಲ್ಲಿವೆ. ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೋಮಾಲಿಯ ಮಧ್ಯ ಭಾಗದಲ್ಲಿ ರಸ್ತೆ ಹದಗೆಟ್ಟಿದ್ದರಿಂದ ಕೆಲಸ ಕಾರ್ಯಗಳಿಗೆ ಬೊಳ್ಳಾಯಿಗೆ ಸುತ್ತುವರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯನ್ನು ದುರಸ್ತಿ ಮಾಡು ವಂತೆ ಸ್ಥಳೀಯ ಸಜಿಪ ಮೂಡ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿ ಮಾಡಲಾಗಿದೆ. ಆದರೆ ಯಾರಿಂದಲೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆ ಹದಗೆಟ್ಟಿರುವುದರಿಂದ ಯಾವುದೇ ವಾಹನಗಳು ಈ ಕಡೆ ಬರುತ್ತಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿ ಗ್ಯಾಸ್ ಸಿಲಿಂಡರ್ ಸಾಗಟದ ಲಾರಿ ಕೆಸರಿನಲ್ಲಿ ಸಿಲುಕಿತ್ತು. ಬಳಿಕ ಜೆಸಿಬಿ ಯಂತ್ರ ತರಿಸಿ ಲಾರಿಯನ್ನು ಮೇಲಕ್ಕೆತ್ತಲಾಯಿತು. ಜೀಪ್, ಆಟೋ ರಿಕ್ಷಾ ಹೀಗೆ ಪ್ರತಿದಿನ ಒಂದಲ್ಲೊಂದು ವಾಹನ ಕೆಸರಿನಲ್ಲಿ ಸಿಲುತ್ತಿವೆ. ಹೀಗಾಗಿ ಈಗ ಎಲ್ಲರೂ ತಮ್ಮ ವಾಹನವನ್ನು ಅರ್ಥ ದಾರಿಯಲ್ಲಿ ಬಿಟ್ಟು ಮನೆಗೆ ಹೋಗುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಸ್ತೆಗೆ ತಾಗಿಕೊಂಡೇ ಚಂರಂಡಿ ನಿರ್ಮಿಸಿರುವುದರಿಂದ ರಸ್ತೆಗೆ ಹಾಕಿರುವ ಮಣ್ಣು ಕೊಚ್ಚಿ ಚಂರಂಡಿ ಸೇರುತ್ತಿದೆ. ಎಲ್ಲಾ ಕಾಮಗಾರಿಯೂ ಸಂಪೂರ್ಣ ಅವೈಜ್ಞಾನಿಕವಾಗಿದೆ. ರಸ್ತೆ ಕೆಸರುಮಯಗೊಂಡಿರುವ ಹಿನ್ನೆಲೆಯಲ್ಲಿ ಕೋಮಾಲಿಯಿಂದ ಬೊಳ್ಳಾಯಿಗೆ ಸುತ್ತುವರಿದು ಹೋಗ ಬೇಕಾದ ದುಸ್ಥಿತಿ ನಿರ್ಮಾಣವಾಗಿದೆ‌ ಎಂದು ಕೋಮಾಲಿ ನಿವಾಸಿಗಳು ತಮ್ಮ ಅಳಲನ್ನು ಹೇಳಿದರು.

ಪಂಚಾಯತ್ ಅಧಿಕಾರಿಗಳು ಕಾಮಗಾರಿ ನಡೆಸಲು ನಮ್ಮಲ್ಲಿ ಹಣವಿಲ್ಲ ಎಂದು ಹೇಳುತ್ತಾರೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪಂಚಾಯತ್ ನವರು ಇಂದು ಒಂದು ಲೋಡ್ ಕೆಂಪು ಕಲ್ಲು ತಂದು ಹಾಕಿದ್ದಾರೆ. ಕಲ್ಲು ಹಾಕಿದರೆ ರಸ್ತೆ ದುರಸ್ಥಿಯಾಗದು. ಸಾರ್ವಜನಿಕರ ಹಣ ವನ್ನು ನೀರಿಗೆ ಹಾಕಿದಂತೆ ಆಗುತ್ತದೆ. ಈ ರಸ್ತೆ ಕಾಂಕ್ರೀಟ್ ಮಾಡಿದರೆ ಮಾತ್ರ ದುರಸ್ತಿ ಆಗಲಿದೆ.‌ ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿ ನಿಧಿಗಳು ಈ ಗಮನ ಹರಿಸಬೇಕು. ವಾರದ ಒಳಗೆ ಸಮಸ್ಯೆಗೆ ಪರಿಹಾರ ಕಾಣದಿದ್ದರೆ ಪಂಚಾಯತ್ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗು ವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News