ಡ್ರಗ್ಸ್ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ದ.ಕ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಗ್ರಹ

Update: 2020-09-23 14:55 GMT

ಬಂಟ್ವಾಳ, ಸೆ.23: ಡ್ರಗ್ಸ್ ಜಾಲದ ವಿರುದ್ಧ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಈ ಜಾಲದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಬುಧವಾರ ಬಂಟ್ವಾಳದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿ ಉನ್ನತಿಸೌಧದಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಈ ಕುರಿತಾಗಿ ಮಾಹಿತಿ ನೀಡಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಮಾದಕವಸ್ತು ಸೇವನೆ ಮತ್ತು ಮಾರಾಟವನ್ನು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ವೇದಿಕೆ ಪದಾಧಿಕಾರಿಗಳ ನಿಯೋಗ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಯವರನ್ನು ಶೀಘ್ರವೇ ಭೇಟಿ ಯಾಗಿ ಚರ್ಚಿಸಲಿದೆ ಎಂದರು.

ಸಾಂಸ್ಕೃತಿಕ ವಲಯದಲ್ಲಿ ಡ್ರಗ್ಸ್ ಜಾಲ ಬೇರೂರಿರುವುದು ಆತಂಕಕಾರಿ ವಿಷಯವಾಗಿದ್ದು ಪ್ರಸಕ್ತ ಯುವ ಜನಾಂಗವು ಇಂತಹ ನಾಯಕ ನಟ, ನಟಿಯರನ್ನು ಅನುಕುರಿಸಿ ದಾರಿತಪ್ಪುತ್ತಿದೆ. ಈ ದೆಸೆಯಲ್ಲಿ ವಾರ್ತಾ ಇಲಾಖೆಯ ಮೂಲಕ ಯುವ ಜನತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ವನ್ನು ಸರಕಾರ ರೂಪಿಸಬೇಕು. ಸ್ಟಾರ್ ಹೊಟೇಲ್, ರೆಸಾರ್ಟ್ ನಲ್ಲಿ ನಡೆಯುವ ಮೋಜು ಮಸ್ತಿ ಹೆಸರಿನ ಪಾರ್ಟಿಯಲ್ಲಿ ಮಾದಕ ವಸ್ತು ಸೇವನೆ, ಪೂರೈಕೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆ ನಿಗಾ ವಹಸಬೇಕು ಎಂದು ವಿವೇಕ್ ವಿನ್ಸೆಂಟ್ ಪಾಯಸ್ ಆಗ್ರಹಿಸಿದರು.

ಮಾದಕ ವಸ್ತು ಸೇವನೆ ಮತ್ತು ಮಾರಾಟ ತಡೆಯಲು ಭಾರತದಲ್ಲಿ ಪ್ರಬಲವಾದ ಕಾನೂನು ಇದ್ದರೂ ಸರಿಯಾಗಿ ಪಾಲನೆಯಾಗುವುದಿಲ್ಲ. ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಶಿಕ್ಷೆಗೆ ಗುರಿಪಡಿಸಬೇಕು. ಈಗ ಪತ್ತೆಯಾಗಿರುವ ಡ್ರಗ್ಸ್ ಜಾಲದ ಬಗ್ಗೆ ಸರಕಾರ ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸುತ್ತಿದ್ದು ಇದರ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ "ಮಾದಕ ಮುಕ್ತ" ರಾಜ್ಯವನ್ನಾಗಿಸುವ ದೆಸೆಯಲ್ಲಿ ಜನಜಾಗೃತಿ ವೇದಿಕೆ ಎಲ್ಲಾರೀತಿ ಸಹಕಾರ ನೀಡಲಿದೆ ಎಂದರು.

ಅಬಕಾರಿ ಇಲಾಖೆಯಿಂದಲೇ ದುರುಪಯೋಗ: ಜಾರಿಯಲ್ಲಿರುವ ಪ್ರಬಲ ಅಬಕಾರಿ ಕಾಯ್ದೆಯನ್ನು ಅಬಕಾರಿ ಇಲಾಖೆಯೇ ಇತ್ತೀಚಿನ ದಿನಗಳಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಿದ ಪಾಯಸ್, ಒಂದು ಗ್ರಾಮವನ್ನು ಪಾನಮುಕ್ತ ಗ್ರಾಮವನ್ನಾಗಿಸುವ ಅವಕಾಶ ಸ್ಥಳೀಯ ಗ್ರಾಮ ಪಂಚಾಯತ್ ಗಳಿಗೆ ಇದ್ದು, ಜನಪ್ರತಿನಿಧಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಬೇಕಾಗಿದೆ. ಸುಳ್ಯದಂತ ತಾಲೂಕಿನ ಕೆಲವು ಗ್ರಾಮಗಳು ಪಾನ ಮುಕ್ತಗ್ರಾಮವಾಗಿ ಪರಿವರ್ತನೆಗೊಂಡಿದೆ ಎಂದು ಉದಾಹರಿಸಿದರು.

ಮಾದಕ ವಸ್ತು, ಪಾನಮುಕ್ತರನ್ನಾಗಿಸುವ ದೆಸೆಯಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರ, ಸಮಾವೇಶ, ಜಾಥಾ, ಬೀದಿ ನಾಟಕ, ಮಾಹಿತಿ ಕಾರ್ಯಾಗಾರ ಸಹಿತ ವಿವಿಧ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಆಕ್ಟೋಬರ್ 2ರಂದು ಈ ಬಾರಿ ವಲಯ ಮಟ್ಟದಲ್ಲಿ ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಕೋವಿಡ್- 19 ಸಂದರ್ಭದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋ., ಜನಜಾಗೃತಿಯ ಮೂಲಕ ಡಾ. ವಿರೇಂದ್ರ ಹೆಗ್ಗಡೆವರ ನಿರ್ದೇಶನದಂತೆ ನೆರವನ್ನು ನೀಡಲಾಗಿದೆ.10 ಸಾವಿರ ಫಲಾನುಭವಿಗಳಿಗೆ ಸುಮಾರು 8 ಕೋಟಿ ರೂ. ಮಾಶಾಸನ ವಿತರಿಸಲಾಗಿದೆ. ಅತೀ ಶೀಘ್ರದಲ್ಲಿ ಬಂಟ್ವಾಳದಲ್ಲಿ ವಿಪತ್ತು ನಿರ್ವಹಣಾ ತಂಡವನ್ನು ಕಾರ್ಯರೂಪಕ್ಕೆ ತರಲಾಗುತ್ತಿದ್ದು ಈ ತಂಡಕ್ಕೆ ವಿಪತ್ತು ಎದುರಿಸಲು ಮತ್ತು ತಕ್ಷಣ ಕಾರ್ಯಪ್ರವೃತ್ತವಾಗಲು ಎನ್ ಡಿ ಆರ್ ಎಫ್ ನಿಂದ ತರಬೇತು ನೀಡಲಾಗುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ, ಕಾರ್ಯದರ್ಶಿ ಸತೀಶ್ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ವೇದಿಕೆಯ ವಿವಿಧ ತಾಲೂಕಿನ ಅಧ್ಯಕ್ಷ ಶಾರದಾ, ಮಹಾಬಲ ರೈ, ವಿಶ್ವನಾಥ ರೈ ಕಳಂಜ, ಮಹಾಬಲ ಚೌಟ, ಅಶ್ವಥ್ ಪೂಜಾರಿ, ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ತಾಲೂಕು ಘಟಕದ ಯೋಜನಾಧಿಕಾರಿ ಜಯಾನಂದ ಪಿ., ಜಿಲ್ಲೆಯ 10 ಘಟಕದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಸಭೆ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News