ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಭೆ

Update: 2020-09-23 15:08 GMT

ಮಂಗಳೂರು, ಸೆ.23: ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಮಾಡುವುದಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿವಾದದ ಮಧ್ಯೆ ಮಾರುಕಟ್ಟೆ ವ್ಯಾಪಾರಸ್ಥರ ಸಂಘವು ಬುಧವಾರ ನಗರದಲ್ಲಿ ಸಭೆ ಸೇರಿ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಿದೆ.

ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವುದಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ಹಿನ್ನಲೆಯಲ್ಲಿ ಮನಪಾ ಆಯುಕ್ತರು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳಲ್ಲಿ ವ್ಯಾಪಾರ ಪರವಾನಿಗೆ ಸಹಿತ ಮತ್ತಿತರ ದಾಖಲೆಪತ್ರ ಸಲ್ಲಿಸುವಂತೆ ಕೋರಿದ್ದರು. ಈ ಮಧ್ಯೆ ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ ಮುಂದುವರಿಸಿರುವವರ ಮುಂದಿನ ನಿಲುವುಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ಎಲ್ಲಾ ವ್ಯಾಪಾರಿಗಳು ಮನಪಾ ಕೋರಿರುವ ದಾಖಲೆಪತ್ರ ಸಲ್ಲಿಸುವುದು ಮತ್ತು ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ ಮಾಡುತ್ತಿರುವವರು ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ಆರಂಭಿಸಲು ಮುಂದಾಗುವಂತೆ ಸಭೆ ಸೂಚಿಸಿದೆ.

ಮನಪಾ ಆಡಳಿತ ವರ್ಗವು ಶೀಘ್ರ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸಿ ಎಂದಿನಂತೆ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ.

ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಎಂಜಿ ಹೆಗ್ಡೆ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಸನ್ ಕೆಮ್ಮಿಂಜೆ, ಕಾರ್ಯದರ್ಶಿ ಜನಾರ್ದನ ಸಾಲ್ಯಾನ್, ಪಿವಿ ಅನಿಲ್, ಹನೀಫ್ ಮಲಾರ್, ಅಮ್ಮಿ ಮಾರಿಪಳ್ಳ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News