‘ಕೇಂದ್ರ ಮಾರುಕಟ್ಟೆ: ವ್ಯಾಪಾರ ಚಟುವಟಿಕೆಗೆ ಸಿದ್ಧತೆ’

Update: 2020-09-23 15:15 GMT

ಮಂಗಳೂರು, ಸೆ. 23: ನಗರದ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಈ ಹಿಂದಿನಂತೆ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಹಂಗಾಮಿ ಅಧ್ಯಕ್ಷ ಕ್ಲಾಸಿಕ್ ಹಸನ್ ತಿಳಿಸಿದ್ದಾರೆ.

ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಮಾನ್ಯತೆ ಪಡೆದ ವ್ಯಾಪಾರ ಪರವಾನಿಗೆ ಹೊಂದಿರುವ ವ್ಯಾಪಾರಸ್ಥರು ವಾಣಿಜ್ಯ ಪರವಾನಿಗೆ ಪತ್ರ, ಗುರುತು ಪತ್ರದೊಂದಿಗೆ ಮನಪಾ ಆಯುಕ್ತ ರನ್ನು ಸಂಪರ್ಕಿಸಲು ನೀಡಿದ ಸೂಚನೆಯಂತೆ ವ್ಯಾಪಾರಿಗಳು ಬುಧವಾರ ದಾಖಲೆಗಳೊಂದಿಗೆ ಭೇಟಿಯಾಗಿದ್ದಾರೆ.

ಸೆ.23 ಮತ್ತು 24ರಂದು ಸಂಜೆ 4ರಿಂದ 6 ಗಂಟೆ ಅವಧಿಯಲ್ಲಿ ಪಾಲಿಕೆ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಪುರಾವೆ ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ ವ್ಯಾಪಾರಿಗಳು ಆಯುಕ್ತರನ್ನು ಸಂಪರ್ಕಿಸಬೇಕು. ದಾಖಲೆಗಳ ಸರಿಯಾದ ಪರಿಶೀಲನೆಯ ಬಳಿಕ ಮತ್ತು ಕೆಲವು ಷರತ್ತುಗಳಿಗೆ ಒಳಪಟ್ಟ ನಂತರ, ಕಾನೂನುಬದ್ಧ ವ್ಯಾಪಾರ ಚಟುವಟಿಕೆಯನ್ನು ಪುನರಾರಂಭಿಸುವ ಬಗ್ಗೆ ವ್ಯಾಪಾರಿಗಳಿಗೆ ಪಾಲಿಕೆ ತಿಳಿಸಲಿದೆ ಎನ್ನುವ ಒಕ್ಕಣೆಯುಳ್ಳ ಸೂಚನೆಯನ್ನು ಸೆಂಟ್ರಲ್ ಮಾರುಕಟ್ಟೆ ದ್ವಾರಗಳಲ್ಲಿ ಅಳವಡಿಸಲಾಗಿದೆ. ಸೆಂಟ್ರಲ್ ಮಾರುಕಟ್ಟೆ ವ್ಯಾಪಾರ ಸ್ಥರ ಸಂಘಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಸೆಂಟ್ರಲ್ ಮಾರುಕಟ್ಟೆ ಬಂದ್ ಮಾಡಲು ಮುಂದಾಗಿದ್ದ ಮಂಗಳೂರು ಮಹಾನಗರ ಪಾಲಿಕೆ ಎರಡು ಬಾರಿಯೂ ಹೈಕೋರ್ಟ್‌ನಲ್ಲಿ ವಿಫಲವಾ ಗಿದೆ. ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮಾರ್ಚ್‌ನಲ್ಲಿ ನಿಷೇಧ ಹೇರಿ ವರ್ತಕರನ್ನು ಎಪಿಎಂಸಿಗೆ ಸ್ಥಳಾಂತರಗೊಳಿಸಲಾಗಿತ್ತು, ವರ್ತಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ತಾನೇ ಹೊರಡಿಸಿದ್ದ ಮಾರ್ಕೆಟ್ ಬಂದ್ ಆದೇಶವನ್ನು ಪಾಲಿಕೆಯು ಹೈಕೋರ್ಟ್‌ನಲ್ಲಿ ಹಿಂಪಡೆದ ಕಾರಣ ಕೆಲ ವ್ಯಾಪಾರಸ್ಥರು ಪಾಲಿಕೆಯ ವಿರೋಧದ ನಡುವೆಯೂ ಆ.13ರಿಂದ ಮತ್ತೆ ಬಾಗಿಲು ತೆರೆದು ವ್ಯಾಪಾರ ಆರಂಭಿಸಿದ್ದರು. ಇದರ ಬೆನ್ನಲ್ಲೇ ಆ.18ರಂದು ಮತ್ತೆ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿಯಲ್ಲೇ ವ್ಯಾಪಾರ ಪುನಃ ಮುಂದುವರಿಸಬೇಕು. ಸೂಚನೆಗಳನ್ನು ಪಾಲಿಸದೆ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರ ಸ್ಥರ ಸಂಘವು ಮತ್ತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು, ಕೇಂದ್ರ ಸರಕಾರ ದಿಂದ ದೇಶಾದ್ಯಂತ ಅನ್‌ಲಾಕ್-4ರಂತೆ ಬಹುತೇಕ ಸಡಿಲಿಕೆ ಮಾಡಲಾಗಿದ್ದು, ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಲಾಗಿದೆ.

ಅನ್‌ಲಾಕ್-4ರ ಮಾರ್ಗಸೂಚಿಯಂತೆ ಸೆಂಟ್ರಲ್ ಮಾರುಕಟ್ಟೆ ಬಂದ್‌ಗೆ ಆದೇಶ ನೀಡಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟು ಜಿಲ್ಲಾಧಿ ಕಾರಿಯ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ವ್ಯಾಪಾರಸ್ಥರು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News