ಟೈಮ್ ಮ್ಯಾಗಝಿನ್‌ನ ‘ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳ’ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಶಾಹೀನ್ ಬಾಗ್ ದಾದಿ

Update: 2020-09-23 16:02 GMT

ಹೊಸದಿಲ್ಲಿ, ಸೆ. 23: ಟೈಮ್ ಮ್ಯಾಗಝಿನ್‌ನ 100 ‘‘ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳು-2020’’ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಿಂದ ಚಿರಪರಿಚಿತರಾದ 82 ವರ್ಷದ ಮಹಿಳೆ ಹಾಗೂ ನಟ ಆಯುಷ್ಮಾನ್ ಖುರಾನಾ ಸ್ಥಾನ ಪಡೆದುಕೊಂಡಿದ್ದಾರೆ. ನಮ್ಮ ಸುತ್ತಮುತ್ತಲು ಈ ವರ್ಷ ಹೆಚ್ಚು ಪ್ರಭಾವ ಬೀರಿರುವ ಪಟ್ಟಿಯಲ್ಲಿ ಆದ್ಯ ಪ್ರವರ್ತಕರು, ಕಲಾವಿದರು, ದಿಗ್ಗಜರು, ನಾಯಕರು ಹಾಗೂ ಮಾದರಿ ವ್ಯಕಿಗಳು ಒಳಗೊಂಡಿದ್ದಾರೆ. ಪ್ರಧಾನಿ ಮೋದಿ ಅವರು ನಾಯಕರ ಶ್ರೇಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದರೆ, ಬಿಲ್ಕಿಸ್ ಆಲಿಯಾಸ್ ‘ಶಾಹೀನ್‌ಬಾಗ್‌ನ ದಾದಿ’ ಮಾದರಿ ವ್ಯಕ್ತಿಗಳ ಶ್ರೇಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ವರ್ಷ 70ನೇ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು 2017ರ ಟೈಮ್ ಮ್ಯಾಗಝಿನ್‌ನ ವಾರ್ಷಿಕ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದರು. ದಿಲ್ಲಿಯ ಶಾಹೀನ್‌ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು. ಅತ್ಯಧಿಕ ಮಹಿಳೆಯರೂ ಸೇರಿದಂತೆ ಸಾವಿರಾರು ಜನರು ದಿಲ್ಲಿಯ ಚಳಿಯನ್ನೂ ಲೆಕ್ಕಿಸದೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು. ‘ಶಾಹೀನ್‌ಬಾಗ್‌ನ ದಾದಿ’ (ಅಜ್ಜಿ) ಎಂದು ಜನಪ್ರಿಯರಾಗಿರುವ ಬಿಲ್ಕಿಸ್ ಅವರು ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದರು. ಈ ಪ್ರತಿಭಟನೆ ಸಂದರ್ಭ ವೃದ್ಧ ಮಹಿಳೆಯರಿಗೆ ಪ್ರತಿ ದಿನ ಮುಂದಿನ ಸಾಲಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಟೈಮ್ ಮ್ಯಾಗಝಿನ್ ಪಟ್ಟಿಯಲ್ಲಿ ಪತ್ರಕರ್ತೆ ಹಾಗೂ ಲೇಖಕಿ ರಾಣಾ ಅಯ್ಯೂಬ್ ಅವರು ಬಿಲ್ಕಿಸ್ ವ್ಯಕ್ತಿ ವಿವರದಲ್ಲಿ, ‘‘ಅವರು ಭಾರತದ ಅಂಚಿಗೆ ತಳ್ಳಲ್ಪಟ್ಟವರ ಧ್ವನಿಯಾಗಿದ್ದಾರೆ’’ ಎಂದಿದ್ದಾರೆ. ‘‘ಒಂದು ಕೈಯಲ್ಲಿ ಜಪ ಮಣಿ ಹಾಗೂ ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಪ್ರತಿಭಟನಾ ಸ್ಥಳದಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿ ವರೆಗೆ ಕುಳಿತುಕೊಂಡ 82ರ ಪ್ರಾಯದ ಬಿಲ್ಕಿಸ್ ಭಾರತದ ಅಂಚಿಗೆ ತಳ್ಳಲ್ಪಟ್ಟವರ ಧ್ವನಿ’’ ಎಂದು ಅವರು ಹೇಳಿದ್ದಾರೆ. ‘‘ನಾವು ನಡೆಸುತ್ತಿರುವ ಪ್ರತಿಭಟನೆ ನೋಡಿ. ಇಲ್ಲಿ ಕೇವಲ ಮುಸ್ಲಿಮರು ಮಾತ್ರ ಪ್ರತಿಭಟನೆ ನಡೆಸುತ್ತಿಲ್ಲ. ಎಷ್ಟು ಮಂದಿ ಆಹಾರ ವಿತರಿಸುತ್ತಿದ್ದಾರೆ ಎಂದು ಇಲ್ಲಿಗೆ ಬಂದು ನೋಡಿ. ಅವರಲ್ಲಿ ಎಲ್ಲ ಧರ್ಮಗಳಿಗೆ ಸೇರಿದವರೂ ಇದ್ದಾರೆ. ಕೆಲವರು ನಮಗೆ ಬಾಳೆಹಣ್ಣು ನೀಡುತ್ತಿದ್ದಾರೆ. ಕೆಲವರು ಜ್ಯೂಸ್ ಹಾಗೂ ಬಿಸ್ಕಿಟ್ ನೀಡುತ್ತಿದ್ದಾರೆ’’ ಎಂದು ಜನವರಿಯಲ್ಲಿ ಬಿಲ್ಕಿಸ್ ಎನ್‌ಡಿಟಿವಿಗೆ ಹೇಳಿದ್ದರು. ಟೈಮ್ ಮ್ಯಾಗಝಿನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಇತರರೆಂದರೆ, ಗೂಗಲ್ ಸಿಇಒ ಸುಂದರ್ ಪಿಚಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಉಪ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಅಧ್ಯಾಪಕ ರವೀಂದ್ರ ಗುಪ್ತಾ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News