ಜಾಗತಿಕ ಸಮುದಾಯಕ್ಕೆ ವಿಶ್ವಾಸಾರ್ಹತೆ ಇಲ್ಲ: ವಿಶ್ವಸಂಸ್ಥೆಯಲ್ಲಿ ಕತರ್ ಅಮೀರ್

Update: 2020-09-23 16:55 GMT
 ಫೋಟೊ ಕೃಪೆ: facebook.com

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 23: ಇಸ್ರೇಲ್‌ನ ಉದ್ಧಟತನ ಮತ್ತು ಫೆಲೆಸ್ತೀನ್ ಮತ್ತು ಅರಬ್ ಜಮೀನುಗಳ ಮೇಲೆ ಅದು ಮಾಡಿರುವ ಅತಿಕ್ರಮಣವನ್ನು ಬೆಂಬಲಿಸುತ್ತಿರುವ ಅಂತರ್‌ ರಾಷ್ಟ್ರೀಯ ಸಮುದಾಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಕತರ್ ಅಮಿರ್ ಶೇಖ್ ತಮೀಮ್ ಬಿನ್ ಹಾಮದ್ ಅಲ್ ಥಾನಿ ಹೇಳಿದ್ದಾರೆ.

ವಿಶ್ವಸಂಸ್ಥೆಯ 75ನೇ ಮಹಾಧಿವೇಶನವನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಇಸ್ರೇಲ್‌ನ ದುರಾಕ್ರಮಣದ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಅಂತರ್‌ರಾಷ್ಟ್ರೀಯ ಸಮುದಾಯ ವಿಫಲವಾಗಿದೆ ಎಂದು ಆರೋಪಿಸಿದರು.

ಫೆಲೆಸ್ತೀನ್ ಭೂಭಾಗಗಳ ಅತಿಕ್ರಮಣ ಮತ್ತು ಜನವಸತಿ ಕಾಲನಿಗಳ ವಿಸ್ತರಣೆಯ ವಿರುದ್ಧ ಅಂಗೀಕರಿಸಲಾದ ನಿರ್ಣಯಗಳನ್ನು ಎತ್ತಿಹಿಡಿಯಲು ದೇಶಗಳು ಮತ್ತು ಸಂಘಟನೆಗಳು ವಿಫಲವಾಗಿವೆ ಎಂದು ಅವರು ನುಡಿದರು.

ಅಂತರ್‌ರಾಷ್ಟ್ರೀಯ ಸಮುದಾಯ ಒಪ್ಪಿಕೊಂಡಿರುವ ಅಂತರ್‌ರಾಷ್ಟ್ರೀಯ ನಿರ್ಣಯಗಳು ಮತ್ತು ಎರಡು-ದೇಶ ಪರಿಹಾರ ಒಪ್ಪಂದವನ್ನು ಇಸ್ರೇಲ್ ನಿರಂತರವಾಗಿ ಉಲ್ಲಂಘಿಸುತ್ತಿದೆ ಎಂದು ಅವರು ಆರೋಪಿಸಿದರು.

 ಅರಬ್ ಶಾಂತಿ ಪ್ರಕ್ರಿಯೆಗೆ ಆಧಾರವಾಗಿರುವ ಹಾಗೂ ಅರಬ್ ದೇಶಗಳು ಅಂಗೀಕರಿಸಿರುವ ನಿರ್ಣಯಗಳನ್ನು ಮತ್ತು ಅಂತರ್‌ರಾಷ್ಟ್ರೀಯ ನಿಯಮಗಳನ್ನು ಇಸ್ರೇಲ್ ಅನುಸರಿಸಿದಾಗ ಮಾತ್ರ ಈ ವಲಯದಲ್ಲಿ ಶಾಂತಿ ನೆಲೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

‘‘ಈ ವಿಷಯಗಳನ್ನು ನಿವಾರಿಸಿಕೊಳ್ಳಲು ಇಸ್ರೇಲ್ ಪ್ರಯತ್ನಿಸುತ್ತಿದೆ. ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದಿರುವ ಯವುದೇ ಒಪ್ಪಂದವು ಶಾಂತಿಯನ್ನು ಸಾಧಿಸುವುದಿಲ್ಲ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News