ಕೊರೋನ ಅವಧಿಯಲ್ಲಿ ಕಾರ್ಮಿಕರಿಗೆ 250 ಲಕ್ಷ ಕೋಟಿ ರೂ. ವೇತನ ನಷ್ಟ

Update: 2020-09-23 16:55 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 23: ಕೊರೋನ ವೈರಸ್ ಸಾಂಕ್ರಾಮಿಕವು ಈ ಹಿಂದೆ ಭಾವಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ನಾಶಪಡಿಸಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ. ಕೋಟ್ಯಂತರ ಉದ್ಯೋಗಗಳು ನಶಿಸಿವೆ ಹಾಗೂ ಕೆಲಸಗಾರರು ಸಂಪಾದನೆಯಲ್ಲಿ ಭಾರೀ ಕಡಿತವನ್ನು ಅನುಭವಿಸಿದ್ದಾರೆ ಎಂದು ಅದು ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ, ಈ ವರ್ಷದ ಮಧ್ಯ ಭಾಗದ ವೇಳೆಗೆ ಜಾಗತಿಕ ಕೆಲಸದ ದಿನಗಳ ಸಂಖ್ಯೆ 17.3 ಶೇಕಡದಷ್ಟು ಕುಸಿದಿದೆ. ಅಂದರೆ ಸುಮಾರು 50 ಕೋಟಿ ಪೂರ್ಣಕಾಲಿಕ ಉದ್ಯೋಗಗಳು ನಶಿಸಿವೆ ಎಂದು ಹೊಸ ಅಧ್ಯಯನವೊಂದರಲ್ಲಿ ವಿಶ್ವಸಂಸ್ಥೆಯ ಘಟಕವಾಗಿರುವ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಕಂಡುಕೊಂಡಿದೆ.

ಇದು ಜೂನ್‌ನಲ್ಲಿ ಸಂಘಟನೆಯು ಅಂದಾಜಿಸಿದ ಸಂಖ್ಯೆಗಿಂತ ಸುಮಾರು 10 ಕೋಟಿ ಅಧಿಕವಾಗಿದೆ. ವರ್ಷದ ಎರಡನೇ ತ್ರೈಮಾಸಿಕದ ಕೊನೆಯ ವೇಳೆಗೆ 14 ಶೇಕಡದಷ್ಟು ಕೆಲಸದ ದಿನಗಳು ನಶಿಸಲಿವೆ ಎಂದು ಅದು ಹೇಳಿತ್ತು. ಆದರೆ, ಈಗ ಅದು 17.3 ಶೇಕಡದಷ್ಟಾಗಿದೆ.

‘‘ಇದರ ಪರಿಣಾಮ ಭಯಾನಕವಾಗಿದೆ’’ ಎಂದು ಸಂಘಟನೆಯ ಮುಖ್ಯಸ್ಥ ಗಯ್ ರೈಡರ್ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 2019ರ ಮೊದಲ ಒಂಭತ್ತು ತಿಂಗಳ ಅವಧಿಗೆ ಹೋಲಿಸಿದರೆ, 2020ರ ಇದೇ ಅವಧಿಯಲ್ಲಿ ಜಾಗತಿಕ ಕಾರ್ಮಿಕ ಆದಾಯವು 10.7 ಶೇಕಡದಷ್ಟು, ಅಂದರೆ 3.5 ಟ್ರಿಲಿಯ ಡಾಲರ್ (ಸುಮಾರು 250 ಲಕ್ಷ ಕೋಟಿ ರೂಪಾಯಿ) ನಷ್ಟು ಕುಸಿದಿದೆ. ಇದು ಒಟ್ಟಾರೆ ಜಾಗತಿಕ ಒಟ್ಟು ದೇಶಿ ಉತ್ಪನ್ನದ 5.5 ಶೇಕಡಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News