ಜಿಪಂ ಅಧ್ಯಕ್ಷರ ಆದೇಶಕ್ಕೆ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ: ಉದ್ಯಾವರ ಪರಿಸರ ರಕ್ಷಣಾ ವೇದಿಕೆ ಹರ್ಷ

Update: 2020-09-23 16:25 GMT

ಉಡುಪಿ, ಸೆ.23: ಉದ್ಯಾವರ ಗ್ರಾಪಂನ ನಿರ್ಣಯವನ್ನು ಕಡೆಗಣಿಸಿ ಉದ್ಯಾವರ ಗ್ರಾಮದಲ್ಲಿ ಕೃಷಿ ಭೂಮಿಯನ್ನು ಕೈಗಾರಿಕಾ ವಲಯದ ಭೂಪರಿವರ್ತನೆಗೆ ಆದೇಶ ನೀಡಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆದೇಶಕ್ಕೆ ರಾಜ್ಯ ಹೈಕೋರ್ಟ್ ಶಾಶ್ವತ ತಡೆಯಾಜ್ಞೆಯನ್ನು ನೀಡಿದೆ ಎಂದು ಆದೇಶ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ ಅಧ್ಯಕ್ಷರ ಜನವಿರೋಧಿ ಆದೇಶದ ವಿರುದ್ಧ ಮಾರ್ಚ್ 9ರಂದು ಸಾರ್ವಜನಿಕ ಪ್ರತಿಭಟನೆಯನ್ನು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಹಮ್ಮಿಕೊಂಡಿದ್ದು, ಇದರಲ್ಲಿ ನಿರ್ಣಯಿಸಿದಂತೆ ಉದ್ಯಾವರ ಗ್ರಾಪಂ ಅಧ್ಯಕ್ಷ ರಾದ ಸುಗಂಧಿ ಶೇಖರ್ ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಜಿಪಂ ಅಧ್ಯಕ್ಷ ಆದೇಶವನ್ನು ಪ್ರಶ್ನಿಸಿ ದಾವೆ ಹೂಡಿದ್ದರು ಎಂದರು.

ಉದ್ಯಾವರ ಗ್ರಾಮದ ಹಿತದೃಷ್ಟಿಯಿಂದ ವೈಯಕ್ತಿಕ ವ್ಯಾಜ್ಯವನ್ನು ಅಧ್ಯಕ್ಷರು ದಾಖಲಿಸಿದ್ದರೆ, ಗ್ರಾಪಂ ಪರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕೂಡಾ ವ್ಯಾಜ್ಯವನ್ನು ದಾಖಲಿಸಿತ್ತು. ಈ ಎರಡೂ ವ್ಯಾಜ್ಯಗಳ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ, ಜಿಪಂ ಅಧ್ಯಕ್ಷರು ಈ ವರ್ಷದ ಜ.31ರಂದು ನೀಡಿದ ಆದೇಶದ ಸಾಧಕ-ಬಾಧಕಗಳನ್ನು ವಿಮರ್ಶಿಸಿ ಇದೇ ಆ.3ಕ್ಕೆ ಜಿಪಂ ಅಧ್ಯಕ್ಷ ಆದೇಶಕ್ಕೆ ಶಾಶ್ವತ ತಡೆಯಾಜ್ಞೆ ಯನ್ನು ನೀಡಿ ಆದೇಶಿಸಿದೆ ಎಂದು ಸೊರಕೆ ನುಡಿದರು.

ಉದ್ಯಾವರದಲ್ಲಿ ಈಗಾಗಲೇ ಮೂರು ಮೀನುಗಾರಿಕಾ ಉತ್ಪನ್ನಗಳ ಕೈಗಾರಿಕೆ (ಫಿಶ್ ಮಿಲ್) ಕಾರ್ಯನಿರ್ವಹಿಸುತಿದ್ದು, ಇವುಗಳಿಂದ ಆಗಿರುವ ಪರಿಸರ ಹಾನಿಯ ವಿರುದ್ಧ ಜನರು ಬಹುಕಾಲದಿಂದ ಹೋರಾಟ ನಡೆಸುತಿದ್ದಾರೆ. ಸದ್ಯ ಒಂದು ಮುಚ್ಚಿದ್ದು, ಎರಡು ಈಗಲೂ ಕಾರ್ಯಾಚರಿ ಸುತ್ತಿವೆ. ಇವುಗಳ ವಿರುದ್ಧ ಜನರ ಪ್ರತಿಭಟನೆಯ ಬಳಿಕ ಎಚ್ಚೆತ್ತುಕೊಂಡ ಗ್ರಾಪಂ ಅವುಗಳ ಪರವಾನಿಗೆಯನ್ನು ರದ್ದುಗೊಳಿಸಿತ್ತು. ಈ ಪ್ರಕರಣ ಈಗ ನ್ಯಾಯಾಲಯದಲ್ಲಿ ತೀರ್ಮಾನಕೆ್ಕ ಬಾಕಿ ಇದೆ ಎಂದವರು ವಿವರಿಸಿದರು.

ಇದರಿಂದ ಉದ್ಯಾವರದ ಜನರ ಬದುಕೇ ದುಸ್ತರವಾಗಿದೆ. ಹೊಳೆಯ ನೀರು ಮಾಲಿನ್ಯವಾಗಿದ್ದು, ಕುಡಿಯುವ ನೀರು ಕಲ್ಮಶವಾಗಿದೆ. ವಾತಾವರ ಣವೂ ಅಸಹನೀಯವಾಗಿದೆ. ಈ ನಡುವೆ ಮತ್ತೊಬ್ಬ ಉದ್ಯಮಿ ಮೀನುಗಾರಿಕಾ ಉತ್ಪನ್ನಗಳ ಕೈಗಾರಿಕೆಗೆ ಆಸಕ್ತಿ ವಹಿಸಿ ಕೃಷಿ ಭೂಮಿಯನ್ನು ಕೈಗಾರಿಕಾ ವಲಯ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದು, ಅದು 2017ರ ಮೇ 27ರ ಸಾಮಾನ್ಯ ಸಭೆಯಲ್ಲಿ ಪರವಾಗಿ ನಿರ್ಣಯವಾಗಿತ್ತು.

ಇದರ ವಿರುದ್ಧ ಜನರು ಪ್ರತಿಭಟನೆ ನಡೆಸಿದಾಗ, ಎಚ್ಚೆತ್ತುಕೊಂಡ ಗ್ರಾಪಂ ಜೂ.3ರಂದು ಮತ್ತೊಂದು ಸಭೆ ಕರೆದು ಹಿಂದಿನ ನಿರ್ಣಯವನ್ನು ರದ್ದುಗೊಳಿತು. ಇದರ ವಿರುದ್ಧ ಉದ್ಯಮಿ ಕೋರ್ಟ್ ಮೊರೆ ಹೋಗಿದ್ದು, ಅದು ಜಿಪಂ ಅಧ್ಯಕ್ಷರು ನಿರ್ಧಾರ ಕೈಗೊಳ್ಳುವಂತೆ ಹೇಳಿತ್ತು.
ಜಿಪಂ ಅಧ್ಯಕ್ಷರು ಪ್ರಕರಣವನ್ನು ತಾಪಂ ಅಧ್ಯಕ್ಷರಿಗೆ ಕಳುಹಿಸಿದ್ದು, ಅವರು ಗ್ರಾಪಂ ನಿರ್ಣಯವನ್ನು ಎತ್ತಿ ಹಿಡಿದಿದ್ದರು. ಆದರೆ 202ರ ಜ.31ರಂದು ಜಿಪಂ ಅಧ್ಯಕ್ಷರು ಏಕಾಏಕಿಯಾಗಿ ಗ್ರಾಪಂ ನಿರ್ಣಯವನ್ನು ತಿರಸ್ಕರಿಸಿ, ಕೈಗಾರಿಕಾ ವಲಯ ಭೂಪರಿವರ್ತನೆಗೆ ಆದೇಶವನ್ನು ನೀಡಿದ್ದರು. ಅದನ್ನು ಗ್ರಾಪಂ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು ಎಂದು ಸೊರಕೆ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಆನಂದ, ಉದ್ಯಾವರ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ವೇದಿಕೆ ಸದಸ್ಯ ಲಾರೆನ್ಸ್ ಡೇಸಾ, ಗ್ರಾಪಂ ಸದಸ್ಯ ದಿವಾಕರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News