ಎನ್‌ಎಚ್‌ಎಂ ಮುಷ್ಕರ ಮುಂದುವರಿಕೆ

Update: 2020-09-23 16:30 GMT

ಉಡುಪಿ, ಸೆ.23: ರಾಜ್ಯದ ರಾಷ್ಟ್ರೀಯ ಆರೋಗ್ಯ ಮಿಷನ್‌ನ (ಎನ್‌ಎಚ್‌ಎಂ) ಸಿಬ್ಬಂದಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಿರುವ ಮುಷ್ಕರ ಎರಡನೆ ದಿನವಾದ ಇಂದೂ ಮುಂದುವರಿದಿದ್ದು, ಇಂದು ಸಹ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಯಾವುದೇ ಅಂಕಿ ಅಂಶಗಳನ್ನು ಇವರು ಅಪ್‌ಲೋಡ್ ಮಾಡದ ಹಿನ್ನೆಲೆಯಲ್ಲಿ ಪ್ರತಿದಿನ ಆರೋಗ್ಯ ಇಲಾಖೆಯ ಮೂಲಕ ಪ್ರಕಟಗೊಳ್ಳುವ ದೈನಂದಿನ ಕೋವಿಡ್-19 ಬುಲೆಟಿನ್ ಇಂದು ಸಹ ಪ್ರಕಟಗೊಂಡಿಲ್ಲ.

ಎನ್‌ಎಚ್‌ಎಂ ಅಡಿಯಲ್ಲಿ ಕೆಲವು ವೈದ್ಯರು, ಸ್ಟಾಫ್ ನರ್ಸ್‌ಗಳು, ಎಎನ್‌ಎಂ ಸಿಬ್ಬಂದಿ, ಇ-ಸಂಜೀವಿನಿ ಸಿಬ್ಬಂದಿಗಳು ಹಾಗೂ ತಂತ್ರಜ್ಞರು ಬರುತಿದ್ದು, ಕೊರೋನಕ್ಕೆ ಸಂಬಂಧಿಸಿದ ಪ್ರತಿದಿನದ ಅಂಕಿಅಂಶಗಳನ್ನು, ವರದಿಗಳನ್ನು ಇವರೇ ಕಾಲ್‌ಸೆಂಟರ್‌ಗಳ ಮೂಲಕ ಸಂಗ್ರಹಿಸಿ ಇಲಾಖೆಗೆ ನೀಡುತಿದ್ದರು.

ಜಿಲ್ಲೆಯಲ್ಲಿ ಸುಮಾರು 450 ಎನ್‌ಎಚ್‌ಎಂ ಸಿಬ್ಬಂದಿಗಳಿದ್ದು, ನಾಳೆಯಿಂದ ಇವರೆಲ್ಲರೂ ಪೂರ್ಣಪ್ರಮಾಣದಲ್ಲಿ ಮುಷ್ಕರ ನಡೆಸುವ ನಿರ್ಣಯ ಕೈಗೊಂಡಿದ್ದಾರೆ. ಎಲ್ಲರೂ ಮನೆಯಲ್ಲೇ ಇದ್ದು ಕೆಲಸಕ್ಕೆ ಬಾರದಿರಲು ನಿರ್ಧರಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿದ್ದು, ಇದರಿಂದ ನಾಳೆಯೂ ಯಾವುದೇ ಕೊರೋನಕ್ಕೆ ಸಂಬಂಧಿಸಿದ ಅಂಕಿಅಂಶ ಲಭ್ಯವಿರುವುದಿಲ್ಲ ಎಂದು ಮೂಲ ಹೇಳಿದೆ.

ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದ ಸಂಜೆಯ ದೈನಿಕ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ 102 ಪಾಸಿಟಿವ್ ಕೇಸುಗಳನ್ನು ನಮೂದಿಸಿದೆ. ಆದರೆ ಉಳಿದಂತೆ ಯಾವುದೇ ಹೊಸ ಅಂಕಿಅಂಶ ಸೇರ್ಪಡೆಗೊಂಡಿಲ್ಲ. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಇದೇ ಟ್ರೆಂಡ್ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News