ವಿದ್ಯುತ್ ಬಿಲ್ ಪಾವತಿಸಲು ಕಾಲಾವಕಾಶ ನೀಡಲು ಮಾಜಿ ಶಾಸಕ ಜೆ. ಆರ್. ಲೋಬೊ ಮನವಿ

Update: 2020-09-23 16:45 GMT

ಮಂಗಳೂರು, ಸೆ.23: ವಿದ್ಯುತ್ ಬಿಲ್ ನಿಗದಿತ ಅವಧಿಯಲ್ಲಿ ಪಾವತಿ ಮಾಡದಿದ್ದರೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವ ಮೆಸ್ಕಾಂ ನಿರ್ಧಾರದ ವಿರುದ್ಧ ಮಾಜಿ ಶಾಸಕ ಜೆ. ಆರ್. ಲೋಬೊರ ನೇತೃತ್ವದ ಕಾಂಗ್ರೆಸ್ ನಿಯೋಗ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಅಧೀಕ್ಷಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೆಸ್ಕಾಂ ಧೋರಣೆಯಿಂದ ಗ್ರಾಹಕರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ. ಸೆ.21ರಿಂದ ಬಿಲ್ ಬಾಕಿದಾರರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮೆಸ್ಕಾಂ ಮುಂದಾಗಿರುವುದು ಪ್ರಕಟವಾಗಿದೆ. ಈ ಏಕಾಏಕಿ ನಿರ್ಧಾರದಿಂದ ಜನಸಾಮಾನ್ಯರಿಗೆ ಹಾಗೂ ಕೈಗಾರಿಕೆಗಳಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಹೇಳಿದರು.

ನೆಫ್ಟ್/ಆರ್‌ಟಿಜಿಎಸ್ ಅಥವಾ ಆನ್‌ಲೈನ್ ಮುಖಾಂತರ ಬಿಲ್ ಪಾವತಿಸುವ ಗ್ರಾಹಕರಿಗೆ ಈಗಾಗಲೇ ಸಂಪೂರ್ಣ ಬಿಲ್ಲಿನ ಮೊತ್ತವನ್ನು ಕಟ್ಟುವ ಸೌಲಭ್ಯವಿದ್ದು, ಇದನ್ನು ಸಡಿಲಗೊಳಿಸಿ ಅವರಿಗೆ ಶಕ್ತಿಗಾನುಸಾರವಾಗಿ ಹಣ ಪಾವತಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಹಕರ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರಕಾರ ಇದರ ಬಗ್ಗೆ ಕ್ರಮ ಕೈಗೊಳ್ಳ ಬೇಕು. ಸರಕಾರ ಮೆಸ್ಕಾಂ ಸಂಸ್ಥೆಗೆ ಆರ್ಥಿಕ ಸಹಕಾರ ನೀಡುವುದರ ಜೊತೆಗೆ ಜನರಿಗೆ ಕಂತುಗಳ ಮುಖಾಂತರ ಬಿಲ್ ಪಾವತಿಸಲು ಅನುವು ಮಾಡಿಕೊಡಬೇಕು. ಸ್ಥಳೀಯ ಸಂಸದರು ಮತ್ತು ಶಾಸಕರು ಸರಕಾರದೊಂದಿಗೆ ಮಾತುಕತೆ ನಡೆಸಿ ಜನಸಾಮಾನ್ಯರಿಗೆ ಆಗುವ ತೊಂದರೆ ಗಳನ್ನು ತಿಳಿಸಲಿ ಎಂದರು.

ಈ ಸಂದರ್ಭ ಮಾಜಿ ಮೇಯರ್ ಹರಿನಾಥ್, ಮಾಜಿ ಉಪ ಮೇಯರ್ ಅಬ್ದುಲ್ ಸಲೀಂ. ಮಾಜಿ ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮಾಜಿ ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್, ಕಾಂಗ್ರೆಸ್ ನಾಯಕರಾದ ಟಿ.ಕೆ.ಸುಧೀರ್, ನೀರಜ್‌ಚಂದ್ರ ಪಾಲ್, ಶುಭೋದಯ ಆಳ್ವ, ಮೋಹನ್ ಶೆಟ್ಟಿ, ಸುಮಂತ್ ರಾವ್, ಡೆನಿಸ್ ಡಿಸಿಲ್ವ, ರಮಾನಂದ ಪೂಜಾರಿ, ಲಾರೆನ್ಸ್, ಶಾಂತಳಾ ಗಟ್ಟಿ, ಟಿ. ಹೊನ್ನಯ್ಯ, ಉದಯ ಕುಂದರ್, ಸಮರ್ಥ್ ಭಟ್, ವಿನಯ್ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News