ಈ ತಿಂಗಳ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿ : ಮೇಯರ್ ದಿವಾಕರ ಪಾಂಡೇಶ್ವರ

Update: 2020-09-24 12:18 GMT

ಮಂಗಳೂರು, ಸೆ.30: ಕೋವಿಡ್‌ನ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಬಾಕಿ ಇರುವವರು ಸೆಪ್ಟಂಬರ್ ಅಂತ್ಯದೊಳಗೆ ಪಾವತಿಸಿ ಸಹಕರಿಸಬೇಕು. ಇಲ್ಲವಾದಲ್ಲಿ ಅಕ್ಟೋಬರ್‌ನಲ್ಲಿ ದಂಡ ಸಹಿತ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಶೇ. 23ರಷ್ಟು ಮಾತ್ರವೇ ಆಸ್ತಿ ತೆರಿಗೆ ಪಾವತಿಯಾಗಿದೆ. ಕೊರೋನ ಹಿನ್ನೆಲೆಯಲ್ಲಿ ಆರಂಭದಲ್ಲಿ ಜುಲೈ ವರೆಗೆ ಸರಕಾರ ದಂಡ ರಹಿತ ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ ನೀಡಿತ್ತು. ಅದನ್ನು ಸೆಪ್ಟಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ಬಾಕಿ ಇರುವವರು ಆಸ್ತಿ ತೆರಿಗೆ ಹಾಗೂ ನೀರಿನ ಬಿಲ್ ಪಾವತಿಸಬೇಕು ಎಂದು ಅವರು ಹೇಳಿದರು.

ನೀರಿನ ಬಿಲ್‌ನಲ್ಲಿನ ಲೋಪದೋಷಗಳ ಕುರಿತಂತೆ ಈಗಾಗಲೇ ಪಾಲಿಕೆಯ ಸುರತ್ಕಲ್, ಮಲ್ಲಿಕಟ್ಟೆ ಹಾಗೂ ಲಾಲ್‌ಬಾಗ್‌ನಲ್ಲಿ ನೀರಿನ ಅದಲಾತ್ ಅಕ್ಟೋಬರ್ ತಿಂಗಳಿನಿಂದ ಆರಂಭಿಸಲಾಗುವುದು ಎಂದು ಮೇಯ್ ದಿವಾಕರ ಪಾಂಡೇಶ್ವರ ತಿಳಿಸಿದರು.

ದಾನಪತ್ರ ಪಡೆದ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದರೆ ವಾರದೊಳಗೆ ತೆರವುಗೊಳಿಸಿ ಕೆಲವು ಕಡೆಗಳಲ್ಲಿ ದಾನಪತ್ರ ಪಡೆದು ನೀಡಿದ ಜಾಗದಲ್ಲಿ ವ್ಯಾಪಾರ ನಡೆಸಲಾಗುತ್ತಿರುವವರಿಗೆ ವಾರದೊಳಗೆ ತೆರವುಗೊಳಿಸಲು ಸೂಚನೆಯನ್ನು ಮನಪಾದಿಂದ ನೀಡಲಾಗಿದೆ. ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.

ಫ್ಲೆಕ್ಸ್ , ಬ್ಯಾನರ್‌ಗಳಿಗೆ ಅನುಮತಿ ಕಡ್ಡಾಯ

ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಫ್ಲೆಕ್ಸ್, ಬ್ಯಾನರ್‌ಗಳನ್ನು (ಕಡ್ಡಾಯವಾಗಿ ಪ್ಲಾಸ್ಟಿಕ್ ರಹಿತ) ಅಳವಡಿಸುವುದಾದಲ್ಲಿ ನಗರ ಪಾಲಿಕೆಯಿಂದ ಪೂರ್ವಾನುಮತಿ ಪಡೆಯಬೇಕು. ಆಯ್ದ ಸ್ಥಳಗಳಲ್ಲಿ ಮಾರ್ಗಸೂಚಿ ಪ್ರಕಾರ ಅನುಮತಿ ನೀಡಲಾಗುವುದು ಎಂದು ಮೇಯರ್ ತಿಳಿಸಿದರು.

ಸೆಂಟ್ರಲ್ ಮಾರುಕಟ್ಟೆ ವ್ಯಾಪಾರ ಪರವಾನಿಗೆ ಹೊಂದಿದವರಿಗೆ ಅವಕಾಶ

ಸೆಂಟ್ರಲ್ ಮಾರುಕಟ್ಟೆಗೆ ಸಂಬಂಧಿಸಿ ಈಗಾಗಲೇ ಪಾಲಿಕೆ ಆಯುಕ್ತರು ಅಲ್ಲಿ ವ್ಯಾಪಾರ ಪರವಾನಿಗೆ ಹೊಂದಿದವರಿಂದ ಅಧಿಕೃತ ದಾಖಲೆಗಳನ್ನು ಕೇಳಿದ್ದಾರೆ. ಅದರಂತೆ ದಾಖಲೆ ತೋರಿಸುವ ಅಧಿಕೃತ ಚಿಲ್ಲರೆ (ರಿಟೇಲ್) ವ್ಯಾಪಾರಿಗಳಿಗೆ ಮಾತ್ರ ಅಲ್ಲಿ ವ್ಯವಹಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

2021ರ ವೇಳೆಗೆ ಆಸ್ತಿ ತೆರಿಗೆ ಆನ್‌ಲೈನ್ 

ಸಾರ್ವಜನಿಕರು ಆನ್‌ಲೈನ್ ಮೂಲಕ ಆಸ್ತಿ ತೆರಿಗೆ, ನೀರಿನ ಬಿಲ್ ಪಾವತಿಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಆಸ್ತಿ ತೆರಿಗೆಗೆ ಸಂಬಂಧಿಸಿ ಪುಸ್ತಕದಿಂದ ಡಿಜಿಟೈಸೇಶನ್ ಪ್ರಕ್ರಿಯೆ ನಡೆದಿದೆ. ಅದರ ವ್ಯಾಲಿಡೇಶನ್ ಆಗಬೇಕಾಗಿದೆ. ಐದಾರು ತಿಂಗಳಲ್ಲಿ ಆಗಲಿದ್ದು, ಮುಂದಿನ ಸಾಲಿನ ಆಸ್ತಿ ತೆರಿಗೆ ಪಾವತಿ ಆನ್‌ಲೈನ್‌ ನಲ್ಲಿ ಅವಕಾಶ ದೊರೆಯಲಿದೆ. ನೀರಿನ ಬಿಲ್ ಆನ್‌ಲೈನ್ ಪಾವತಿಗೂ ಪ್ರಕ್ರಿಯೆ ನಡೆಸಲಾಗುವುದು ಎಂದು ಪಾಲಿಕೆಯ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ಉಪ ಮೇಯರ್ ಜಾನಕಿ ಯಾನೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್, ಕಿರಣ್, ಪೂರ್ಣಿಮಾ, ಜಗದೀಶ್ ಶೆಟ್ಟಿ, ಹಿರಿಯ ಸದ್ಯ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News