ಶೀಘ್ರದಲ್ಲೇ ಮಾಸ್ಕ್ ಕಡ್ಡಾಯ ಅಭಿಯಾನ: ಮೇಯರ್ ದಿವಾಕರ ಪಾಂಡೇಶ್ವರ

Update: 2020-09-24 12:40 GMT

ಮಂಗಳೂರು, ಸೆ.24: ಕೇರಳದಲ್ಲಿ ಮಾಸ್ಕ್ ಕಡ್ಡಾಯ ಮಾಡುವ ಮೂಲಕ ಕೊರೋನ ವಿರುದ್ಧ ಜನಜಾಗೃತಿಯನ್ನು ಸಾರಲಾಗುತ್ತಿದೆ. ಆದರೆ ಮಂಗಳೂರಿನಲ್ಲಿ ಜನಸಾಮಾನ್ಯರು ಸಾರ್ವಜನಿಕ ಸ್ಥಳಗಳಲ್ಲಿಯೂ ಮಾಸ್ಕ್ ಇಲ್ಲದೆ ಓಡಾಡುತ್ತಿರುವುದು ಕಂಡು ಬಂದಿರುವುದರಿಂದ ಶೀಘ್ರವೇ ಮನಪಾ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯವೆಂಬ ಅಭಿಯಾನ ಮಾಡಲಾಗುವುದು ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ ನವೀಕರಣ ಮಾಡದಿರುವವರು ತಕ್ಷಣ ಮಾಡಿಸ ಬೇಕು. ಈಗಾಗಲೇ ಕೊರೋನ ಹಿನ್ನೆಲೆಯಲ್ಲಿ ನವೀಕರಣಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಎಂದರು.

ಮುಂದಿನ ವಾರದಿಂದ ಟೈಗರ್ ಕಾರ್ಯಾಚರಣೆ

ಕೋವಿಡ್ ಕಾರಣದಿಂದ ಕೆಲಸವಿಲ್ಲದೆ ಬಹಳಷ್ಟು ಮಂದಿ ನಗರದ ಬೀದಿ ಬದಿಗಳಲ್ಲಿ ಮೀನು, ಹಣ್ಣಿನ ವ್ಯಾಪಾರ ನಡೆಸುತ್ತಿದ್ದಾರೆ. ಪಾಲಿಕೆ ವತಿಯಿಂದ ಈ ಹಿಂದೆ ಸುಮಾರು 600ರಷ್ಟು ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಅವರನ್ನು ಹೊರತುಪಡಿಸಿ ಉಳಿದಂತೆ ನಗರದ ಬೀದಿ ಬದಿಗಳಲ್ಲಿ ವ್ಯಾಪಾರ ನಡೆಸುವುದನ್ನು ತೆರವುಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ವಾರದಿಂದ ಟೈಗರ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ಕ್ಲಾಕ್ ಟವರ್‌ನ ಸುತ್ತಲಿನ ವೃತ್ತ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದು ಅಗಲವಾಗಿರುವ ಕುರಿತಂತೆ ದೂರು ಬಂದ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸ್ ಆಯುಕ್ತರು ಕಾಮಗಾರಿ ನಿಲ್ಲಿಸಿದ್ದಾರೆ. ಈ ಬಗ್ಗೆ ಪಾಲಿಕೆಯ ಹಿರಿಯ ಸದಸ್ಯರ ಜತೆ ಪರಿಶೀಲನೆ ಮಾಡಿದ್ದು, ಹೊರಗಿನ ಸರ್ಕಲ್ ತೆರವಿಗೆ ಸ್ಮಾರ್ಟ್ ಸಿಟಿ ಅಧಿಕಾರಿ ಗಳಿಗೆ ಸೂಚಿಸಲಾಗಿದೆ. ಇದೇ ವೇಳೆ ಕ್ಲಾಕ್ ಟವರ್ ಹಾಗೂ ಅಳಿಕೆ ಮಾರುಕಟ್ಟೆ ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.

ರಸ್ತೆ ನಾಮಕರಣ ತರಾತುರಿಯಲ್ಲಿ ಮಾಡಿಲ್ಲ

ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದ ರಾಮ ಶೆಟ್ಟಿ ಹೆಸರು ನಾಮಕರಣ ತರಾತುರಿಯಲ್ಲಿ ಮಾಡಿದ್ದಲ್ಲ. ಕೋರ್ಟ್ ತೀರ್ಪಿನ ಪ್ರಕಾರ ಸರಕಾರ ಆದೇಶದ ಮೇರೆಗೆ ಮಾಡಲಾಗಿದೆ. ಹಾಗಾಗಿ ಎಲ್ಲಾ ಪ್ರಕ್ರಿಯೆಗಳ ಕುರಿತಂತೆಯೂ ಸಂಬಂಧಪಟ್ಟವರಿಗೆ ಮಾಹಿತಿ ಇರುವುದರಿಂದ ಅವರಿಗೆ ಪ್ರತ್ಯೇಕವಾಗಿ ಮನಪಾದಿಂದ ಹೇಳಬೇಕೆಂದಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಹಲವಾರು ವರ್ಷಗಳಿಂದ ಯಾವುದೇ ರಾಜಕೀಯ ಬೇಧ ಬಾವವಿಲ್ಲದೆ ರಸ್ತೆ, ವೃತ್ತಗಳಿಗೆ ನಾಮಕರಣ ಪ್ರಕ್ರಿಯೆ ನಡೆಯುತ್ತದೆ. ಎಲ್ಲಿಯೂ ಗೊಂದಲ ಆಗಿಲ್ಲ. ಈ ರಸ್ತೆಯ ವಿಚಾರದಲ್ಲಿ ಮಾತ್ರವೇ ಗೊಂದಲ ಆಗಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ಪಾಲಿಕೆಯ ಬಗ್ಗೆ ದೂರುಗಳಿದ್ದಲ್ಲಿ ದೂರು ಪೆಟ್ಟಿಗೆಗೆ ಹಾಕಿ

ಪಾಲಿಕೆಯ ಸದಸ್ಯರು, ಅಧಿಕಾರಿಗಳು ಸೇರಿದಂತೆ ಕೆಲಸ, ಕಾರ್ಯಗಳ ಕುರಿತಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ಮನಪಾ ಕಚೇರಿಯ ಒಳ ಆವರಣದಲ್ಲಿ ಇರಿಸಲಾಗುವ ಸಹಾಯವಾಣಿ ದೂರು ಪೆಟ್ಟಿಗೆಗೆ ಹಾಕಬಹುದು. ದೂರು ನೀಡುವವರ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಎರಡು ದಿನಗಳಿಗೊಮ್ಮೆ ದೂರನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯ್ ದಿವಾಕರ ಪಾಂಡೇಶ್ವರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News