ಯೋಧರಿಗೆ 300 ಮಾಸ್ಕ್‌ಗಳನ್ನು ತಯಾರಿಸಿ ಕಳುಹಿಸಿದ ಬಾಲಕಿ

Update: 2020-09-24 12:57 GMT

ಉಡುಪಿ, ಸೆ.24: ಕೋವಿಡ್-19 ಹಿನ್ನೆಲೆಯಲ್ಲಿ ಸ್ವತಃ ತಾನೇ ತಯಾರಿಸಿದ 300 ಮಾಸ್ಕ್‌ಗಳನ್ನು ದೇಶದ ರಕ್ಷಣೆಗಾಗಿ ದುಡಿಯುತ್ತಿರುವ ಯೋಧರಿಗೆ ಕಳುಹಿಸಿಕೊಟ್ಟಿದ್ದ ಉಡುಪಿಯ ವಿದ್ಯಾರ್ಥಿನಿಯೊಬ್ಬಳು, ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಉಡುಪಿ ಅಂಬಲಪಾಡಿಯ ನಂದಿತಾ ಹಾಗೂ ಗಿರೀಶ್ ಆಚಾರ್ ದಂಪತಿ ಯ ಪುತ್ರಿ ಇಶಿತಾ ಆಚಾರ್(13) ಸಚಿವರಿಂದ ಅಭಿನಂದನೆಗೆ ಪಾತ್ರರಾಗಿ ರುವ ಬಾಲಕಿ. ಮಣಿಪಾಲ ಮಾಧವಾ ಕೃಪಾ ಶಾಲೆಯಲ್ಲಿ ಎಂಟನೆ ತರಗತಿ ಯಲ್ಲಿ ಕಲಿಯುತ್ತಿರುವ ಇಶಿತಾಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನಾ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.

ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿರುವ ಇಶಿತಾ, ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಹೊಲಿಗೆಯನ್ನು ಕಲಿತುಕೊಂಡಿದ್ದು, ಬಿಡುವಿನ ಅವಧಿಯಲ್ಲಿ ಪರೀಕ್ಷೆ ಬರೆಯಲಿದ್ದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ 300 ಮಾಸ್ಕ್ ಗಳನ್ನು ಸ್ವತಃ ತಾನೇ ಹೊಲಿದು ತಯಾರಿಸಿದರು.

ಈ ರೀತಿ ಮಕ್ಕಳು ಹೊಲಿದ ಮಾಸ್ಕ್‌ಗಳನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಸ್ಕ್ ಬ್ಯಾಂಕ್‌ಗೆ ನೀಡಲಾಗುತ್ತದೆ. ಆದರೆ ಆಗಲೇ ಮಾಸ್ಕ್ ಬ್ಯಾಂಕ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್‌ಗಳು ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಇಶಿತಾ ತಾನು ತಯಾರಿಸಿದ ಮಾಸ್ಕ್‌ಗಳನ್ನು ಬೇರೆಯವರಿಗೆ ನೀಡುವ ಯೋಚನೆ ಮಾಡಿದರು. ಅದರಂತೆ ಅಗತ್ಯ ಇರುವವರಿಗೆ ಮಾಸ್ಕ್ ವಿತರಿಸಿದ ಇಶಿತಾ, ತನ್ನ ತಾಯಿ ಸ್ನೇಹಿತರೊಬ್ಬರು ನೀಡಿದ ಮಾಹಿತಿಯಂತೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಮಾಸ್ಕ್‌ಗಳನ್ನು ಕಳುಹಿಸಿಕೊಡಲು ನಿರ್ಧರಿಸಿದರು.

ಹೀಗೆ ಇಶಿತಾ ಸುಮಾರು 300 ಮಾಸ್ಕ್‌ಗಳನ್ನು ಕೇಂದ್ರ ರಕ್ಷಣಾ ಸಚಿವರ ವಿಳಾಸಕ್ಕೆ ಕೋರಿಯರ್ ಮೂಲಕ ಕಳುಹಿಸಿಕೊಟ್ಟರು. ಬಾಲಕಿ ತೋರಿದ ದೇಶ ಪ್ರೇಮ ಹಾಗೂ ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ತಿಂಗಳ ಬಳಿಕ ಕೇಂದ್ರ ರಕ್ಷಣಾ ಸಚಿವ ಕಾರ್ಯಾಲಯದಿಂದ ಬಾಲಕಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಹಾರೈಕೆ ಮಾಡಿರುವ ಪತ್ರ ತಲುಪಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಸುಮ್ಮನೆ ಕೂರುವ ಬದಲು ತಾಯಿ ಹಾಗೂ ಯುಟ್ಯೂಬ್ ಮೂಲಕ ಮಾಸ್ಕ್ ತಯಾರಿಸುವುದನ್ನು ಕಲಿತುಕೊಂಡೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಸ್ಕ್ ಬ್ಯಾಂಕಿಗೆ ನೀಡಲು ತಯಾರಿಸಿದ 300 ಮಾಸ್ಕ್‌ಗಳನ್ನು ದೇಶ ಕಾಯುವ ಸೈನಿಕರಿಗೆ ಕಳುಹಿಸಿಕೊಟ್ಟೆ. ಆದರೆ ರಕ್ಷಣಾ ಸಚಿವರಿಂದ ಈ ರೀತಿ ಪತ್ರ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇದೀಗ ಪತ್ರ ನೋಡಿ ತುಂಬಾ ಸಂತೋಷ ಆಗಿದೆ.

-ಇಶಿತಾ ಆಚಾರ್, ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News