ಉಡುಪಿ: ರೋಗ ಹರಡುವ ತಾಣವಾಗುತ್ತಿರುವ ಇನ್ನೂ ಉದ್ಘಾಟನೆಯಾಗದ ನರ್ಮ್ ಬಸ್ ನಿಲ್ದಾಣ!

Update: 2020-09-24 12:59 GMT

ಉಡುಪಿ, ಸೆ.24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ನಗರ ಸಾರಿಗೆ(ನರ್ಮ್) ಬಸ್ ನಿಲ್ದಾಣವು ಉದ್ಘಾಟನೆಗೆ ಮೊದಲೇ ನಿರ್ವಹಣೆ ಇಲ್ಲದೆ ಕುಡುಕರ ತಾಣವಾಗುತ್ತಿದೆ. ಸ್ವಚ್ಛತೆ ಇಲ್ಲದ ಪರಿಣಾಮ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.

ಬಸ್ ನಿಲ್ದಾಣದಲ್ಲಿ ಕುಡುಕರು ಮದ್ಯ ಸೇವನೆ ಮಾಡುತ್ತಿರುವುದು, ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿವೆ. ಇಲ್ಲಿ ನೆಲೆ ಕಂಡಿರುವ ವಲಸೆ ಕಾರ್ಮಿಕರು ಗುಟ್ಕಾ ತಿಂದು ಅಲ್ಲಲ್ಲಿ ಉಗಿದು ಹೊಸದಾಗಿ ನಿರ್ಮಿಸ ಲಾದ ಬಸ್ ನಿಲ್ದಾಣದ ಅಂದವನ್ನು ಕೆಡಿಸಿದ್ದಾರೆ. ಎಲ್ಲೆಂದರಲ್ಲಿ ಕಸ ತ್ಯಾಜ್ಯಗಳ ರಾಶಿಯೇ ಬಿದ್ದುಕೊಂಡಿದೆ. ಇಲ್ಲಿ ಕಸ ತ್ಯಾಜ್ಯಗಳ ವಿಲೇವಾರಿಯು ಸರಿಯಾಗಿ ನಡೆಯುತ್ತಿಲ್ಲ ಎಂದು ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾ ನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ಮಾರಕ ಸೊಳ್ಳೆಗಳ ಉತ್ಪತ್ತಿಗೂ ಇಲ್ಲಿಯ ಪರಿಸರವು ಕಾರಣವಾಗಿದ್ದು, ಡೆಂಗ್, ಮಲೇರಿಯಾ ಮುಂತಾದ ಕಾಯಿಲೆಗಳು ಹರಡುವ ಭೀತಿ ಎದು ರಾಗಿದೆ. ಪರಿಸರದಲ್ಲಿ ಕೊರೊನಾ ಸೋಂಕು ಹರಡುವ ಅವಕಾಶ ಕೂಡ ಮಾಡಿ ಕೊಡಲಾಗುತ್ತಿದೆ. ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಗುಂಪು ಸೇರಿಕೊಂಡು, ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ. ನಿಲ್ದಾಣದ ವಠಾರವು ಬಯಲು ಶೌಚಾಲಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ನರ್ಮ್ ಬಸ್ ನಿಲ್ದಾಣದಲ್ಲಿ ತಕ್ಷಣ ಸುವ್ಯವಸ್ಥೆ ಕಾಪಾಡಬೇಕು. ಆದಷ್ಟು ಬೇಗ ನಗರಸಭೆ ನಿಲ್ದಾಣ ಪರಿಸರವನ್ನು ಶುಚಿತ್ವಗೊಳಿಸಬೇಕು ಮತ್ತು ಕಾವಲುಗಾರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News