ಉಯಿಘರ್ ಮುಸ್ಲಿಮರಿಗಾಗಿ ಕಶ್ಗರ್‌ನಲ್ಲಿ ಹೊಸ ದೈತ್ಯ ಬಂಧನ ಕೇಂದ್ರ ಸ್ಥಾಪನೆ

Update: 2020-09-24 14:27 GMT
ಸಾಂದರ್ಭಿಕ ಚಿತ್ರ

ಕಶ್ಗರ್ (ಚೀನಾ), ಸೆ. 24: ಪಶ್ಚಿಮ ಚೀನಾದ ಕಶ್ಗರ್ ನಗರದಲ್ಲಿರುವ ಉದ್ಯೋಗ ತರಬೇತಿ ಶಾಲೆ ಮತ್ತು ಉಗ್ರಾಣಗಳ ಪಕ್ಕದಲ್ಲೇ 45 ಅಡಿ ಎತ್ತರದ ಗೋಡೆಗಳು ಮತ್ತು ದೈತ್ಯ ಕಾವಲುಗೋಪುರಗಳನ್ನೊಳಗೊಂಡ ಬೃಹತ್ ಕಟ್ಟಡವೊಂದು ಎದ್ದು ನಿಂತಿದೆ.

ಪಶ್ಚಿಮ ಚೀನಾದಲ್ಲಿ ಪ್ರಭುತ್ವವು ಉಯಿಘರ್ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ದಮನ ಕಾರ್ಯಾಚರಣೆಯ ಭಾಗವಾಗಿ ಅದು ಸ್ಥಾಪಿಸಿರುವ ಇನ್ನೊಂದು ಕಾವಲುಗೋಪುರ ಇದಾಗಿರುವ ಸಾಧ್ಯತೆಯಿಲ್ಲ.

60 ಎಕರೆ ವಿಸ್ತಾರದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವು ಹೊಸ ಬಂಧನ ಕೇಂದ್ರವಾಗಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ. ಐದು ಮಹಡಿಗಳ 13 ವಸತಿ ಕಟ್ಟಡಗಳನ್ನು ಹೊಂದಿರುವ ಈ ಸಂಕೀರ್ಣವನ್ನು ಜನವರಿಯಲ್ಲಷ್ಟೇ ಉದ್ಘಾಟಿಸಲಾಗಿದೆ. ಅಲ್ಲಿ 10,000ಕ್ಕೂ ಅಧಿಕ ಜನರು ವಾಸಿಸಬಹುದಾಗಿದೆ.

ಕ್ಸಿನ್‌ಜಿಯಾಂಗ್ ವಲಯದಾದ್ಯಂತ ಚೀನಾದ ಅಧಿಕಾರಿಗಳು ನಿರ್ಮಿಸಿರುವ ಡಝನ್‌ಗಟ್ಟಳೆ ಜೈಲಿನಂಥ ಬಂಧನ ಕೇಂದ್ರಗಳ ಪೈಕಿ ಕಶ್ಗರ್‌ನಲ್ಲಿರುವ ಕಟ್ಟಡವೂ ಒಂದು ಎಂದು ಆಸ್ಟ್ರೇಲಿಯನ್ ರಕ್ಷಣಾ ನೀತಿ ಸಂಸ್ಥೆಯ ಉಪಕ್ರಮವಾಗಿರುವ ಕ್ಸಿನ್‌ಜಿಯಾಂಗ್ ಡೇಟಾ ಪ್ರಾಜೆಕ್ಟ್ ಹೇಳಿದೆ.

ಉಯಿಘರ್ ಮುಸ್ಲಿಮರ ಮೇಲೆ ಚೀನಾ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಮತ್ತು ಆಕ್ರೋಶ ವ್ಯಕ್ತವಾಗಿರುವ ಹೊರತಾಗಿಯೂ, ಚೀನಾದ ಮೇಲೆ ಅದು ಯಾವುದೇ ಪರಿಣಾಮವನ್ನು ಉಂಟು ಮಾಡಿಲ್ಲ ಎನ್ನುವುದನ್ನು ಈ ನೂತನ ಬಂಧನ ಕೇಂದ್ರ ತೋರಿಸುತ್ತದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News