ಜನಸಾಗರದ ಸಮ್ಮುಖದಲ್ಲಿ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅಂತ್ಯಕ್ರಿಯೆ

Update: 2020-09-24 15:56 GMT

ಮಂಗಳೂರು, ಸೆ.24: ಹಿರಿಯ ವಿದ್ವಾಂಸ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರ ಅಂತ್ಯಕ್ರಿಯೆಯು ಜನಸಾಗರದ ಸಮ್ಮುಖದಲ್ಲಿ ಮೋಂಟುಗೋಳಿ ಸಮೀಪದ ಮರಿಕ್ಕಳ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಗುರುವಾರ ರಾತ್ರಿ ಸುಮಾರು 8.05ಕ್ಕೆ ನಡೆಯಿತು.

ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ, ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಜಾಮಿಅ ಸಅದಿಯ್ಯ ಅರಬಿಯ್ಯದ ಅಧ್ಯಕ್ಷ ಸೈಯದ್ ಕೆಎಸ್ ಆಟಕ್ಕೋಯ ತಂಙಳ್ ಕುಂಬೋಲ್, ಆಲಿಕುಂಞಿ ಉಸ್ತಾದ್ ಶಿರಿಯ, ಪೆರುವಾಯಿ ತಂಙಳ್, ಸಿಟಿಎಂ ತಂಙಳ್, ಶಾಸಕ ಯು.ಟಿ. ಖಾದರ್, ಕಣ್ಣೂರು ಸಂಸದ ಅಬ್ದುಲ್ಲ ಕುಟ್ಟಿ, ಸೈಯದ್ ಅಲಿ ಬಾಫಕಿ ತಂಙಳ್, ಕೃಷ್ಣಾಪುರ ಖಾಝಿ ಅಲ್ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ಮತ್ತಿತರರು ಸಹಿತ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಯ್ಯಿತ್ ನಮಾಝ್‌ನ ನೇತೃತ್ವ ವಹಿಸಿದ್ದರು. ಡಾ. ಕಾವಳಕಟ್ಟೆ ಹಝ್ರತ್ ದಿಕ್ರ್ ಮತ್ತು ದುಆದ ನೇತೃತ್ವ ವಹಿಸಿದ್ದರು.

ಗುರುವಾರ ಬೆಳಗ್ಗೆ ಸುಮಾರು 10:45ಕ್ಕೆ ಮೃತರಾದ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರ ಮೃತದೇಹವನ್ನು ಮೊಂಟೆಪದವಿನ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಿಧನ ಸುದ್ದಿ ತಿಳಿದೊಡನೆ ಬಹಳಷ್ಟು ಮಂದಿ ಮೊಂಟೆಪದವಿನ ಮನೆಯ ಬಳಿ ಜಮಾಯಿಸಿದ್ದರು. ಸುಮಾರು 11 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಯಿತು. ಬಳಿಕ ಅವರ ಸಾವಿರಾರು ಶಿಷ್ಯಂದಿರು, ಅಭಿಮಾನಿಗಳ ಸಹಿತ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಧಾರ್ಮಿಕ ಗುರುಗಳು, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News