ಶ್ರೀನಗರ: ವಕೀಲ ಬಾಬರ್ ಖಾದ್ರಿಯನ್ನು ಗುಂಡಿಕ್ಕಿ ಕೊಂದ ಬಂದೂಕುಧಾರಿ

Update: 2020-09-24 18:48 GMT

ಶ್ರೀನಗರ, ಸೆ. 24: ಶ್ರೀನಗರದಲ್ಲಿ ಗುರುವಾರ 40 ವರ್ಷದ ನ್ಯಾಯವಾದಿಯೊಬ್ಬರನ್ನು ಅವರ ನಿವಾಸದಲ್ಲಿ ಶಂಕಿತ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದ ನ್ಯಾಯವಾದಿಯನ್ನು ಬಾಬರ್ ಖಾದ್ರಿ ಎಂದು ಗುರುತಿಸಲಾಗಿದೆ. ಅವರು ಟಿ.ವಿ. ಚರ್ಚೆಯಲ್ಲಿ ನಿರಂತರ ಭಾಗವಹಿಸುತ್ತಿದ್ದರು ಹಾಗೂ ಸ್ಥಳೀಯ ದಿನಪತ್ರಿಕೆಯಲ್ಲಿ ಸಂಪಾದಕೀಯ ಪುಟದಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

ಮೂರು ದಿನಗಳ ಹಿಂದೆ ಅವರು ತನ್ನ ವಿರುದ್ಧದ ಅಪ ಪ್ರಚಾರದ ಸ್ಕ್ರೀನ್ ಶಾಟ್ ಅನ್ನು ಟ್ವೀಟ್ ಮಾಡಿದ್ದರು ಹಾಗೂ ಅಪಪ್ರಚಾರ ನಡೆಸುತ್ತಿರುವ ಫೇಸ್‌ಬುಕ್ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.

ನಾನು ಏಜೆನ್ಸಿಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಅಪಪ್ರಚಾರ ನಡೆಸುತ್ತಿರುವ ಶಾಹ್ ನಝೀರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಆಡಳಿತದಲ್ಲಿ ನಾನು ಆಗ್ರಹಿಸುತ್ತೇನೆ. ಈ ಅಸತ್ಯ ಹೇಳಿಕೆ ನನ್ನ ಜೀವಕ್ಕೆ ಅಪಾಯ ಒಡ್ಡಬಹುದು ಎಂದು ಖಾದ್ರಿ ಅವರು ತನ್ನ ಕೊನೆಯ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ಶಂಕಿತ ಭಯೋತ್ಪಾದಕರು ಖಾದ್ರಿ ಅವರಿಗೆ ಗುಂಡು ಹಾರಿಸಿದ ಬಳಿಕ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಎಸ್‌ಕೆಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಶಂಕಿತ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಿರುವ ಎರಡನೇ ವ್ಯಕ್ತಿ ಖಾದ್ರಿ. ಈ ಹಿಂದೆ ಬುಧವಾರ ರಾತ್ರಿ ಬುಡ್ಗಾಂವ್ ಜಿಲ್ಲೆಯ ಬ್ಲಾಕ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಭೂಪಿಂದರ್ ಸಿಂಗ್ ಅವರನ್ನು ಶಂಕಿತ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News