ಈ ದೇಶದ ಸಂಪತ್ತು ಜನರದ್ದೇ ಹೊರತು ಬಿಜೆಪಿಯದ್ದಲ್ಲ: ಕೆ.ಶಂಕರ್

Update: 2020-09-24 14:50 GMT

ಉಡುಪಿ, ಸೆ.24: ಭೂ ಮಸೂದೆ ಮತ್ತು ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮೋದಿ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ವರ್ತಿಸುತ್ತಿ ದ್ದಾರೆ. ಈ ದೇಶದ ಸಂಪತ್ತನ್ನು ಲೂಟಿ ಮಾಡಲು ಬಹುರಾಷ್ಟ್ರೀಯ ಕಂಪೆನಿ ಗಳಿಗೆ ಅವಕಾಶ ನೀಡಬಾರದು. ಈ ದೇಶದ ಸಂಪತ್ತು ದೇಶದ ಜನರದ್ದೆ ಹೊರತು ಬಿಜೆಪಿಯವರದ್ದಲ್ಲ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್ ಟೀಕಿಸಿದ್ದಾರೆ.

ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಚಲೋ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸರಕಾರ ಎಲ್ಲವನ್ನು ಖಾಸಗೀಕರಣ ಮಾಡಲು ಹೊರಟಿದೆ. ಖಾಸಗೀಕರಣ ದಿಂದ ಈ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಸರಕಾರ ಕೋವಿಡ್ ನಿಂದ ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರು, ಕೃಷಿಕೂಲಿ ಕಾರ್ಮಿಕರ ಕಾನೂನು ಬದ್ಧ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದೆ. ಮೋದಿ ಸರಕಾರ ದೇಶದ ಆರ್ಥಿಕ ಸ್ಥಿತಿ ಹಾಳು ಮಾಡುವುದರ ಜೊತೆಗೆ, ಕಾರ್ಮಿಕರನ್ನು ಮಾಲಕರ ಗುಲಾಮರನ್ನಾಗಿ ಸುವ ವ್ಯವಸ್ಥೆಯನ್ನು ಜಾರಿಗೆ ತುತ್ತಿದೆಂದು ಅವರು ಆರೋಪಿಸಿದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸರಕಾರದ ನೀತಿಯಿಂದ ಹೋರಾಟ ಮಾಡಿ ಪಡೆದುಕೊಂಡಿದ್ದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ನಮ್ಮ ಕೈತಪ್ಪಿ ಹೋಗುವ ಲಕ್ಷಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಮಾಡಬೇಕಾ ಗಿದೆ. ಕಾರ್ಮಿಕರ ಕಾಯಿದೆಗಳ ತಿದ್ದುಪಡಿಯನ್ನು ಮೋದಿ ಸರಕಾರವು ಮಾಲಕರ ಪರವಾಗಿ ತರುತ್ತಿದೆಯೇ ಹೊರತು ಕಾರ್ಮಿಕರ ಪರವಾಗಿ ಅಲ್ಲ ಎಂದರು.

ಬಳಿಕ ಈ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಖಜಾಂಚಿ ಶಶಿಧರ ಗೊಲ್ಲ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಅಧ್ಯಕ್ಷ ಶೇಖರ್ ಬಂಗೇರ, ಖಜಾಂಚಿ ಗಣೇಶ ನಾಯ್ಕ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯ ದರ್ಶಿ ಕವಿರಾಜ್ ಎಸ್., ಜಿಲ್ಲಾ ಹಂಚು ಕಾರ್ಮಿಕರ ಸಂಘದ ಕಾರ್ಯದರ್ಶಿ ಎಚ್.ನರಸಿಂಹ, ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೆಯರಹೊಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಬಲ್ಕೀಸ್, ನಳಿನಿ, ಅಂಗನವಾಡಿ ಸಂಘದ ಅಧ್ಯಕ್ಷೆ ಭಾರತಿ, ಬಿಸಿಯೂಟ ಸಂಘದ ಅಧ್ಯಕ್ಷೆ ಸುನಂದ, ಕಾರ್ಯದರ್ಶಿ ಕಮಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News