ಸೇನಾಪುರ ಗ್ರಾಮ ಹೊಸಾಡು ಗ್ರಾಪಂಗೆ ಸೇರ್ಪಡೆ

Update: 2020-09-24 15:22 GMT

ಉಡುಪಿ, ಸೆ.24: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 4 ರಂತೆ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಹೊಸದಾಗಿ ಬೈಂದೂರು ತಾಲೂಕು ರಚನೆಯ ಸಂದರ್ಭದಲ್ಲಿ ನಾಡಾ ಗ್ರಾಪಂ ವಿಭಜನೆಯಾಗಿ ಈ ಗ್ರಾಪಂ ವ್ಯಾಪ್ತಿಯಲ್ಲಿದ್ದ ಸೇನಾಪುರ ಗ್ರಾಮವು ಕುಂದಾಪುರ ತಾಲೂಕಿಗೆ ಸೇರಿರುವುದರಿಂದ ಅದನ್ನು ಹತ್ತಿರದ ಹೊಸಾಡು ಗ್ರಾಪಂಗೆ ಸೇರ್ಪಡೆ ಮಾಡುವ ಬಗ್ಗೆ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮದಡಿ ನಿರ್ದೇಶನ ನೀಡಲಾಗಿತ್ತು.ಅದರಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.

ಅಧಿಸೂಚನೆ ಕುರಿತು ಸಾರ್ವಜನಿಕರು ಮೇಲ್ಮನವಿ ಸಲ್ಲಿಸುವುದಾದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ಇವರಿಗೆ ಅಧಿಸೂಚನೆ ಪ್ರಕಟಿಸಿದ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News