ಸೌದಿ ಅರೇಬಿಯಾ ರಾಷ್ಟ್ರೀಯ ದಿನಾಚರಣೆ : ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ ರಕ್ತದಾನ ಶಿಬಿರ

Update: 2020-09-24 17:16 GMT

ರಿಯಾದ್ : ಅನಿವಾಸಿ ಸಾಮಾಜಿಕ ಸಂಘಟನೆಯಾದ ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ವತಿಯಿಂದ ಸೌದಿ ಅರೇಬಿಯಾದ 90ನೇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರವು ರಿಯಾದಿನಲ್ಲಿರುವ ಪ್ರಿನ್ಸ್ ಮಹಮ್ಮದ್ ಬಿನ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ನಡೆಯಿತು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಸಯೀದ್ ಅಹಮದ್ (ಡೀನ್- ಬ್ಲಡ್ ಬ್ಯಾಂಕ್, ಪ್ರಿನ್ಸ್ ಮಹಮ್ಮದ್ ಬಿನ್ ಅಬ್ದುಲ್ ಅಝೀಝ್ ಆಸ್ಪತ್ರೆ) ರಕ್ತದಾನವು ಅತ್ಯಂತ ಶ್ರೇಷ್ಠ ದಾನವಾಗಿದ್ದು, ಮತ್ತು ಅದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು. ಈ ಕಾರ್ಯದಲ್ಲಿ ಸದಾ ತೊಡಗಿಕೊಂಡಿರುವ ಇಂಡಿಯಾ ಫ್ರೆಟರ್ನಿಟಿ ಫೋರಂ ಸದಸ್ಯರನ್ನು ಶ್ಲಾಘಿಸಿದರು. ಇಂತಹ ಸ್ಪೂರ್ತಿದಾಯಕ ಕಾರ್ಯಕ್ರಮಗಳಿಗೆ ಆಸ್ಪತ್ರೆಯ ಬೆಂಬಲ ಮತ್ತು ಸಹಕಾರ ಸದಾ ಇರುತ್ತದೆ ಎಂಬ ಭರವಸೆ ನೀಡಿದರು.

ಕೊರೋನ ಸಂಧಿಗ್ದ ಪರಿಸ್ಥಿತಿ ಯಲ್ಲಿ ರಕ್ತದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು  ಆಗಮಿಸಿದ್ದರು. ಬೆಳಗ್ಗೆ 10 ರಿಂದ ಸಂಜೆ 3 ರ ವರೆಗೆ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ರಕ್ತದಾನ ಶಿಬಿರದ ಯಶಸ್ವಿಗೆ ಶ್ರಮಿಸಿದ ಇಂಡಿಯಾ ಫ್ರೆಟರ್ನಿಟಿ ಫೋರಂ ಸದಸ್ಯರು ಮತ್ತು ರಕ್ತದಾನಿಗಳಿಗೆ ಆಸ್ಪತ್ರೆಯ ಹಿರಿಯ ವೈದರಾದ ಡಾ. ಫಹಾದ್ ಹಕ್ಮಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ರೀಜನಲ್ ಅಧ್ಯಕ್ಷರಾದ ಬಶೀರ್ ಎಂಗಾಪುಯ ವಹಿಸಿದ್ದರು. ಈ ಸಂದರ್ಭದಲ್ಲಿ ಐ.ಎಫ್.ಎಫ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿಯಾದ ಮೊಹಮ್ಮದ್ ನವೀದ್, ಶಿಬಿರದ ಉಸ್ತುವಾರಿ ಅಬೂಬಕ್ಕರ್ ಸಿದ್ದೀಕ್ ಮಡಿಕೇರಿ ಮತ್ತು ಐ.ಎಫ್.ಎಫ್ ಉತ್ತರ ಭಾರತ ಚಾಪ್ಟರ್ ಅಧ್ಯಕ್ಷ ಜಾವೇದ್ ಹೈದರಬಾದ್ ಉಪಸ್ಥಿತರಿದ್ದರು.  ತಾಜುದ್ದೀನ್  ಸ್ವಾಗತಿಸಿ, ಅಬ್ದುಲ್ ಹಕ್ ಬೆಂಗಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News