ಸೆ.25ರಿಂದ ವಿ4 ಸ್ಟ್ರೀಮ್‍ನಲ್ಲಿ ಮೂಡಿಬರಲಿದೆ "ನಂದಗೋಕುಲ"

Update: 2020-09-24 17:18 GMT

ಮಂಗಳೂರು: ಕರ್ನಾಟಕದ ಮೊತ್ತಮೊದಲ ಒಟಿಟಿ ಪ್ಲ್ಯಾಟ್‍ಫಾರಂ ‘ವಿ4 ಸ್ಟ್ರೀಮ್’ನಲ್ಲಿ ಹೊಸ ಹೊಸ ಕಂಟೆಂಟ್‍ಗಳು ನಿರಂತರವಾಗಿ ಅಪ್‍ಲೋಡ್ ಆಗುತ್ತಿದೆ. ವಾರಕ್ಕೊಂದರಂತೆ ವಿವಿಧ ಭಾಷೆಯ ಸಿನಿಮಾಗಳು ಕೂಡ ತೆರೆಕಾಣುತ್ತಿವೆ. ಇದೀಗ ಇವುಗಳ ಸಾಲಿಗೆ ನಂದಗೋಕುಲ ಎನ್ನುವ ಕನ್ನಡ ಸಿನಿಮಾ ಕೂಡ ಸೇರ್ಪಡೆಗೊಳ್ಳುತ್ತಿದೆ. ಸೆಪ್ಟೆಂಬರ್ 25ರಿಂದ ‘ನಂದಗೋಕುಲ’ ಸಿನಿಮಾ ವಿ4 ಸ್ಟ್ರೀಮ್‍ನಲ್ಲಿ ಸ್ಟ್ರೀಮಿಂಗ್ ಆಗಲಿದೆ. 

ನಂದಗೋಕುಲ ಎನ್ನುವುದು ನರಸಿಂಹ ಎಂ. ಜೋಶಿಯವರ ನಿರ್ಮಾಣ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನದ ಮೂಲಕ ತಯಾರಾದ ಕನ್ನಡ ಸಿನಿಮಾ. ಒಂದು ಕುಟುಂಬ ಅಂದ್ರೆ ಹೇಗಿರಬೇಕು ಹಾಗೆಯೇ ಭಕ್ತೆಯೋರ್ವಳ ಭಕ್ತಿಗೆ ಕೃಷ್ಣ ಒಲಿದು ಬರುವ ಪರಿಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಚಿತ್ರದಲ್ಲಿ ರಾಕೇಶ್, ತೇಜಸ್ವಿನಿ, ಮಂಜೇಶ್ ಕಲಾಲ್, ಸಂಗೀತ ಶೆಟ್ಟಿ, ರಮೇಶ್ ಭಟ್, ಬ್ಯಾಂಕ್ ಜನಾರ್ಧನ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. 

ಚಿತ್ರಕ್ಕೆ ಸಂಗೀತವನ್ನು ಮದನ್ ಮೋಹನ್ ಒದಗಿಸಿದರೆ, ಕ್ಯಾಮರಾದಲ್ಲಿ ಮಹಾಬಲೇಶ ಮತ್ತು ತಂಡ ಸಹಕಾರ ನೀಡಿದೆ. ಕಾರ್ಯಕಾರಿ ನಿರ್ಮಾಪಕಿಯಾಗಿ ಗೀತಾ ಎನ್ ಜೋಶಿಯವರು ಸಹಕರಿಸಿದ್ದಾರೆ. ಇನ್ನು ಖ್ಯಾತ ಹಾಡುಗಾರ ರಾಜೇಶ್ ಕೃಷ್ಣನ್ ಸೇರಿದಂತೆ ಹಲವರ ಕಂಠಸಿರಿಯ ಹಿನ್ನೆಲೆ ಗಾಯನ ಈ ಚಿತ್ರಕ್ಕಿದೆ. ಒಟ್ಟಿನಲ್ಲಿ ನಂದಗೋಕುಲ ಅನ್ನೋ ಕನ್ನಡ ಸಿನಿಮಾ ವಿ4 ಸ್ಟ್ರೀಮ್‍ನಲ್ಲಿ ಸೆ. 25ರಿಂದ ಮೂಡಿಬರುತ್ತಿದ್ದು, ಗೂಗಲ್ ಪ್ಲೇಸ್ಟೋರ್‍ನಿಂದ ವಿ4 ಸ್ಟ್ರೀಮ್ ಆಪ್‍ನ್ನು ಡೌನ್‍ಲೋಡ್ ಮಾಡಿ ಸಿನಿಮಾ ನೋಡಿ ಆನಂದಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News