ಗ್ರಾಪಂನಲ್ಲಿ ಸಿಗಲಿದೆ ಜನನ-ಮರಣ ಪ್ರಮಾಣಪತ್ರ

Update: 2020-09-24 17:39 GMT

ಮಂಗಳೂರು, ಸೆ. 24: ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಜನನ-ಮರಣ ಪ್ರಮಾಣಪತ್ರಗಳ ವಿತರಣಾಧಿಕಾರಿ ಗಳನ್ನಾಗಿ ನೇಮಸಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಆನ್‌ಲೈನ್ ಜನನ-ಮರಣ ನೋಂದಣಿ ವ್ಯವಸ್ಥೆಯು 2015ರ ಎಪ್ರಿಲ್ 1 ರಿಂದ ಜಾರಿಯಲ್ಲಿದ್ದು, ಈ ದಿನಾಂಕದ ನಂತರದಲ್ಲಿ ನೋಂದಣಿಯಾದ ದಾಖಲೆಗಳನ್ನು ಸರಕಾರವು ನಿಗದಿಪಡಿಸಿದ ದರಗಳನ್ವಯ ಸೇವಾ ಶುಲ್ಕ ಪಾವತಿಸಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕರು ಪ್ರಮಾಣಪತ್ರ ಪಡೆಯಬಹುದು.

ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೋಂದಣಿಯಾದ ಜನನ-ಮರಣ ಘಟನೆಗಳನ್ನು ಹೆಸರು, ದಿನಾಂಕ, ತಂದೆ, ತಾಯಿಯ ಹೆಸರು ನಮೂದಿಸಿ ಪ್ರಮಾಣಪತ್ರ ಹುಡುಕಬಹುದು. ಗ್ರಾಪಂ ವ್ಯಾಪ್ತಿಯ ಹೊರಗಡೆ ನೋಂದಣಿಯಾದ ಜನನ-ಮರಣ ಘಟನೆಗಳ ಪ್ರಮಾಣಪತ್ರ ಹುಡುಕಲು ನೋಂದಣಿ ಸಂಖ್ಯೆ ಕಡ್ಡಾಯ. ಪ್ರತಿಯೊಂದು ಜನನ-ಮರಣ ಪ್ರಮಾಣಪತ್ರದ ಪ್ರತಿಗಳಿಗೆ 5 ರೂ. ಶುಲ್ಕ ಪಾವತಿಸಬೇಕು ಎಂದು ದ.ಕ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಅಪರ ಜಿಲ್ಲಾ ಜನನ-ಮರಣ ರಿಜಿಸ್ಟ್ರಾರ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News