"ಯಾರೂ ಹಸಿವಿನಿಂದ ನರಳಬಾರದು": ಅಕ್ಕಿ ಎಟಿಎಂ ಆರಂಬಿಸಿದ ಎಂಬಿಎ ಪದವೀಧರನ ಮನದಾಳದ ಮಾತು

Update: 2020-09-25 11:32 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್: ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಎಂಬಿಎ ಪದವೀಧರ ರಾಮು ದೋಸಪತಿ ಅವರು ಆರಂಭಿಸಿರುವ 'ಅಕ್ಕಿ ಎಟಿಎಂ' ಎಲ್ಲೆಡೆ ಶ್ಲಾಘನೆ ಪಡೆದಿದೆ. ಮನೆಯಲ್ಲಿ  ಅಕ್ಕಿ ಇಲ್ಲ ಇನ್ನೇನು ಮಾಡುವುದು ಎಂದು ಯೋಚಿಸದೆ ಬಡವರು ಇವರ  ಅಕ್ಕಿ ಎಟಿಎಂಗೆ ತೆರಳಿ ಎರಡು ದಿನಗಳಿಗಾಗುವಷ್ಟು ಅಕ್ಕಿ ಪಡೆದುಕೊಳ್ಳಬಹುದಾಗಿದೆ.

ರಾಮು ದೋಸಪತಿ ಅವರ ಈ ಅಕ್ಕಿ ಎಟಿಎಂನಿಂದ ಲಾಕ್ ಡೌನ್ ಆರಂಭಗೊಂಡ ಮಾರ್ಚ್ ತಿಂಗಳಿನಿಂದ ಇಲ್ಲಿಯ ತನಕ 12,000ಕ್ಕೂ ಅಧಿಕ ಕುಟುಂಬಗಳು ಪ್ರಯೋಜನ ಪಡೆದಿವೆ ಹಾಗೂ ಇನ್ನೂ ಹಲವಾರು ಜನರು ಪ್ರಯೋಜನ ಪಡೆಯುತ್ತಲೇ ಇದ್ದಾರೆ.

ಎಲ್ ಬಿ ನಗರ್ ಪಕ್ಕದಲ್ಲಿರುವ ಈ ಅಕ್ಕಿ ಎಟಿಎಂ ಕಾರ್ಮಿಕರಿಗೆ ಹಾಗೂ ಲಾಕ್ ಡೌನ್‍ನಿಂದ ಕೆಲಸ ಕಳೆದುಕೊಂಡ ಅಥವಾ ವೇತನ ಕಡಿತ ಮಾಡಲ್ಪಟ್ಟವರಿಗೆ ವರದಾನವಾಗಿದೆ. "ಯಾರು ಕೂಡ ಹಸಿವಿನಿಂದ ನರಳಬಾರದೆಂದು ನಾನು ಈ ಅಕ್ಕಿ ಎಟಿಎಂ ಆರಂಭಿಸಿದೆ,'' ಎಂದು ರಾಮು ದೋಸಪತಿ ಹೇಳುತ್ತಾರೆ.

ಅಷ್ಟಕ್ಕೂ ಈ ಕಾರ್ಯ ಕೈಗೆತ್ತಿಕೊಳ್ಳಲು ಸ್ಫೂರ್ತಿಯೇನು ಎಂಬ ಪ್ರಶ್ನೆಗೆ ಉತ್ತರಿಸುವ ಅವರು ತಾವು 2006ರಲ್ಲಿ ಅಪಘಾತಕ್ಕಿಡಾದ ನಂತರ ತಲೆಗೆ ಗಾಯಗೊಂಡಿದ್ದಾಗಿ ಹಾಗೂ ಶೀಘ್ರ ಗುಣಮುಖನಾದರೆ ಜನರ ಸೇವೆ ಮಾಡುವುದಾಗಿ ದೇವರಿಗೆ ಪ್ರಾರ್ಥಿಸಿ ಮಾತು ಕೊಟ್ಟಿದಾಗಿ ಹೇಳುತ್ತಾರೆ.

ಜತೆಗೆ ಲಾಕ್ ಡೌನ್ ಸಮಯ ಯಾವುದೇ ಆಹಾರವಿಲ್ಲದೆ ಒಡಿಶಾದ ವಲಸಿಗ ಕಾರ್ಮಿಕರ ಕುಟುಂಬಗಳು ಕಂಗಾಲಾಗಿದ್ದಾಗ ವಾಚ್ ಮ್ಯಾನ್ ಒಬ್ಬರ ಕುಟುಂಬ ರೂ. 2,000  ಖರ್ಚು ಮಾಡಿ ಅವರಿಗೆ ಸಹಾಯ ಮಾಡಿದ್ದನ್ನು ನೋಡಿ ನನಗೂ ಏನಾದರೂ ಸಹಾಯ ಮಾಡಬೇಕೆಂದೆನಿಸಿತು, ಎನ್ನುವ ಅವರು ``ಕೈಯ್ಯಲ್ಲಿದ್ದ ರೂ. 1 ಲಕ್ಷ ಹಾಗೂ ಪಿಎಫ್‍ನಿಂದ ರೂ. 3 ಲಕ್ಷ ಪಡೆದು ಅಕ್ಕಿ ಖರೀದಿಸಿದ್ದಾಗಿ ಹೇಳುತ್ತಾರೆ. ಅವರ ಕೆಲಸ ನೋಡಿ ಹಲವಾರು ಮಂದಿ ಅಕ್ಕಿ ಮತ್ತಿತರ ಸಾಮಗ್ರಿ ಒದಗಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News