ಹಳ್ಳಿಹೊಳೆ ಸಾರ್ವಜನಿಕ ಸ್ಮಶಾನ ಜಾಗ ಒತ್ತುವರಿಗೆ ಪಟ್ಟಭದ್ರರ ಪ್ರಯತ್ನ: ದಸಂಸ ಆರೋಪ, ಕ್ರಮಕ್ಕೆ ಒತ್ತಾಯ

Update: 2020-09-25 14:11 GMT

ಕುಂದಾಪುರ, ಸೆ. 25: ಹಳ್ಳಿಹೊಳೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೆ ನಂ 198ರಲ್ಲಿ 0.20 ಎಕ್ರೆ ಜಮೀನನ್ನು ಈಗಾಗಲೇ ಸಾರ್ವಜನಿಕ ಸ್ಮಶಾನಕ್ಕಾಗಿ ಸರಕಾರ ವತಿಯಿಂದ ಕಾದಿರಿಸಲಾಗಿದ್ದು, ಇದೀಗ ಊರಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಜಾಗದ ಒತ್ತುವರಿಗೆ ಪ್ರಯತ್ನಿಸುತ್ತಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಹಳ್ಳಿಹೊಳೆ ಗ್ರಾಪಂ ವ್ಯಾಪ್ತಿಯಲ್ಲಿ ಬೇರೆ ಜಾಗ ಇಲ್ಲದೆ ಇರುವುದರಿಂದ ಅನಾದಿ ಕಾಲದಿಂದಲೂ ದಲಿತರು, ಹಿಂದುಳಿದವರು ಸರಕಾರ ಗ್ರಾಪಂ ಮೂಲಕ ಕಾದಿರಿಸಿದ ಇದೇ ಜಾಗದಲ್ಲಿ ಶವ ಸಂಸ್ಕಾರ ನಡೆಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಸಂಪ್ರದಾಯವಾದಿ ಪಟ್ಟಭದ್ರ ಹಿತಾಸಕ್ತಿ ಗಳು ಸ್ಮಶಾನ ಜಮೀನು ಒತ್ತುವರಿ ಮಾಡಲು ಹುನ್ನಾರ ಮಾಡುತ್ತಿರುವುದು ಕಂಡುಬಂದಿದು, ಅವರಿಗೆ ಕೆಲ ಜನಪ್ರತಿನಿಧಿಗಳ ಬೆಂಬಲವೂ ಇರುವುದು ಗಮನಕ್ಕೆ ಬಂದಿದೆ ಎಂದು ದಸಂಸ ಜಿಲ್ಲಾ ಸಂಘಟಕ ವಾಸುದೇವ ಮುದೂರು ದೂರಿದ್ದಾರೆ.

ಸ್ಮಶಾನ ಜಾಗಕ್ಕೆ ಹೋಗುವ ಮಾರ್ಗದಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದ್ದು, ಈ ದೇವಸ್ಥಾನಕ್ಕೂ ಸ್ಮಶಾನದ ಜಾಗಕ್ಕೂ ಸಾಕಷ್ಟು ಅಂತರವಿ ದ್ದರೂ ಸಹ ಇಲ್ಲಿ ದಲಿತರು, ಹಿಂದುಳಿದವರ ಶವಸಂಸ್ಕಾರ ಮಾಡಿದರೆ ದೇವರಿಗೆ ಮೈಲಿಗೆ ಆಗುತ್ತದೆ ಎನ್ನುವ ಮಡಿವಂತಿಕೆ ಮನಸ್ಥಿತಿಯ ಕೆಲವು ಸಂಪ್ರದಾಯವಾದಿಗಳು ಅಸ್ಪೃಶ್ಯತೆ ಆಚರಣೆಗೆ ಮುಂದಾಗಿದ್ದು, ದೇವಸ್ಥಾನದ ಹೆಸರಿನಲ್ಲಿ ಸ್ಮಶಾನ ಜಾಗವನ್ನು ಕಬಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಇಲ್ಲಿನ ಚಕ್ರಾ ನದಿ ದಂಡೆಯ ಪಕ್ಕದಲ್ಲೇ ಇರುವ ಈ ಸಾರ್ವಜನಿಕ ಸಶ್ಮಾನ ಜಾಗಕ್ಕೆ ತಾಗಿಕೊಂಡೇ ಖಾಸಗಿ ವ್ಯಕ್ತಿಯೊಬ್ಬರ ಜಮೀನಿದ್ದು, ಸ್ಮಶಾನ ಜಾಗಕ್ಕೆ ಹೊಂದಿಕೊಂಡಿರುವ ನೂರಾರು ಎಕರೆ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಇವರು, ಅಲ್ಲಿಯೇ ಸನಿಹದಲ್ಲೇ ಇರುವ ಚಕ್ರಾನದಿಗೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಸರಕಾರ ಕಟ್ಟಿರುವ ವೆಂಟೆಡ್ ಡ್ಯಾಮ್‌ನ ಪಕ್ಕದಲ್ಲೇ ಅಕ್ರಮವಾಗಿ ಎರಡು ಬೃಹತ್ ಕೆರೆಗಳನ್ನು ತೋಡಿ ಸರಕಾರ ಕಟ್ಟಿರುವ ಅಣೆಕಟ್ಟಿಗೆ ಭವಿಷ್ಯದಲ್ಲಿ ಅಪಾಯ ತಂದೊಡ್ಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಈ ಎಲ್ಲಾ ಅಕ್ರಮಗಳ ಜೊತೆಗೆ ದೇವಸ್ಥಾನದ ಹೆಸರಿನಲ್ಲಿ ಸ್ಮಶಾನ ಜಾಗವನ್ನು ಕಬಳಿಸಿ, ದಲಿತರು ಹಾಗೂ ಹಿಂದುಳಿದವರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಗೆ ಪ್ರೇರಣೆ ನೀಡಿ ಸಾರ್ವಜನಿಕ ಸಾಮರಸ್ಯ ಕದಡಲು ಹುನ್ನಾರ ನಡೆಸಿದ್ದಾರೆ. ಇಂಥ ಪಟ್ಟಭದ್ರ ಹಿತಾಸಕ್ತಿಗಳಿಗೆ ಇದಕ್ಕೆ ಅವಕಾಶ ನೀಡಬಾರದು ಎಂದಿರುವ ವಾಸುದೇವ ಮುದೂರು, ಈಗಾಗಲೇ ಕುಂದಾಪುರದ ಉಪವಿಭಾಗಾಧಿಕಾರಿಗಳ ಸೂಚನೆಯಂತೆ ಬೈಂದೂರು ತಹಶೀಲ್ದಾರ್ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಪ್ರತಿಭಟನೆಯ ಎಚ್ಚರಿಕೆ: ಒಂದು ವೇಳೆ ಇಂಥ ಪಟ್ಟಭದ್ರರ ಒತ್ತಾಸೆಗೆ ಮಣಿದು ಸ್ಮಶಾನ ಜಾಗವನ್ನು ರದ್ದುಪಡಿಸಲು ಸಂಬಂಧಪಟ್ಟ ಇಲಾಖೆ ಮುಂದಾದಲ್ಲಿ ಸಾರ್ವಜನಿಕರ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಪತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ವಾಸುದೇವ ಮುದೂರು, ರಾಮ ನಾಯ್ಕ ಹಳ್ಳಿಹೊಳೆ, ಮಂಜು ಹಳ್ಳಿಹೊಳೆ, ಉಮೇಶ ಹನ್ಕಿ, ಶಂಕರ, ಆನಂದು, ಸತೀಶ ಇವರು ಸಂಯುಕ್ತ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ತಹಶೀಲ್ದಾರ್‌ರಿಂದ ಸ್ಥಳ ಪರಿಶೀಲನೆ

ದೇವಸ್ಥಾನದ ಸಮೀಪದಲ್ಲಿಯೇ ಇರುವ ಜಾಗದಲ್ಲಿ ಶವ ಸಂಸ್ಕಾರ ಮಾಡು ವುದರಿಂದ ತೊಂದರೆ ಆಗುತ್ತಿದೆ ಎಂಬ ಕುಂದಾಪುರ ಉಪ ವಿಭಾಗಾಧಿಕಾರಿ ಗಳಿಗೆ ದೂರು ಬಂದಿದ್ದು, ಅದರಂತೆ ಸೆ. 24ರಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನದ ಸಮೀಪದಲ್ಲಿಯೇ ಶವ ಸಂಸ್ಕಾರ ಮಾಡುವುದರಿಂದ ದೇವಸ್ಥಾನದ ಪಾವಿತ್ರತೆಗೆ ಧಕ್ಕೆಯಾಗುವುದರಿಂದ ಸ್ಮಶಾನವನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ದೂರು ಬಂದಿದ್ದು, ಅದರಂತೆ ಸ್ಥಳ ಪರಿಶೀಲನೆ ನಡೆಸಲು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ವರದಿ ನೀಡಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕುಂದಾಪುರ ಉಪವಿಭಾ ಗಾಧಿಕಾರಿ ರಾಜು ತಿಳಿಸಿದ್ದಾರೆ.

ಬಡವರಿಗಿದೊಂದೇ ಸ್ಮಶಾನ

ಹಳ್ಳಿಹೊಳೆಯಲ್ಲಿ ಶ್ರೀಮಂತರಿಗೆ, ಮೇಲ್ವರ್ಗದವರಿಗೆ ಬೇಕಷ್ಟು ಜಾಗವಿದೆ. ಆದರೆ ದಲಿತರು, ಹಿಂದುಳಿದವರು, ಬಡವರಿಗೆ ಅಂತ್ಯಸಂಸ್ಕಾರ ಕ್ಕಿರುವುದು ಇದೊಂದು ಜಾಗ. ಅನಾದಿ ಕಾಲದಿಂದಲೂ ಇಲ್ಲೇ ಅವರು ಶವಸಂಸ್ಕಾರ ನಡೆಸಿಕೊಂಡು ಬಂದಿದ್ದಾರೆ. ಗ್ರಾಪಂ ಸ್ಮಶಾನ ಜಾಗಕ್ಕೆ ಆವರಣಗೋಡೆ ಕಟ್ಟಲು ನಿಧಿ ಕಾದಿರಿಸಿದಾಗ, ಜಾಗದ ಮೇಲೆ ಕಣ್ಣಿಟ್ಟ ಪಟ್ಟಭದ್ರರು ದೇವಸ್ಥಾನದ ಹೆಸರಿನಲ್ಲಿ ಜಾಗ ಕಬಳಿಸಲು ಮುಂದಾಗಿ ದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ. -ವಾಸುದೇವ ಮುದೂರು, ದಸಂಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲ

1999ರಲ್ಲಿ 20 ಸೆಂಟ್ಸ್ ಸರಕಾರಿ ಜಾಗವನ್ನು ಸ್ಮಶಾನಕ್ಕಾಗಿ ಕಾಯ್ದಿರಿಸ ಲಾಗಿತ್ತು. ಸ್ಮಶಾನ ಅಭಿವೃದ್ಧಿ ಮತ್ತು ಜಾಗ ಸಮತಟ್ಟುಗೊಳಿಸಲು 14ನೆ ಹಣಕಾಸು ಯೋಜನೆಯಲ್ಲಿ 2018-19 ಮತ್ತು 19-20ನೆ ಸಾಲಿನಲ್ಲಿ ತಲಾ 90ಸಾವಿರ ರೂ. ಹಣ ಮೀಸರಿಸಿ, ಫೆಬ್ರವರಿ ಅಂತ್ಯದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿ ಅರ್ಧ ನಡೆಯುವ ಸಂದರ್ಭ ಅಲ್ಲೇ ಸಮೀಪದ 200 ಮೀಟರ್ ದೂರದಲ್ಲಿರುವ ದೇವಸ್ಥಾನ ಕಮಿಟಿಯವರು ಈ ಕಾಮಗಾರಿಗೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದರು. ಅಲ್ಲಿಂದ ಕಾಮಗಾರಿಯನ್ನು ಸ್ಥಗಿತಗೊಳಿ ಸಿದ್ದೇವೆ. ನಾವು ಕೂಡ ಅದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

-ಸುದರ್ಶನ್, ಪಿಡಿಓ, ಹಳ್ಳಿಹೊಳೆ ಗ್ರಾಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News