ನಾಲ್ಕು ಬಾರಿ ಉಡುಪಿಗೆ ಬಂದಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ

Update: 2020-09-25 15:31 GMT

ಉಡುಪಿ, ಸೆ. 25: ಇಂದು ನಿಧನರಾದ ದಕ್ಷಿಣ ಚಿತ್ರರಂಗದ ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಒಟ್ಟು ನಾಲ್ಕು ಬಾರಿ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದು, ಎರಡು ಬಾರಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಇನ್ನೆರಡು ಬಾರಿ ಉಡುಪಿ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರು ದೇವಸ್ಥಾನಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

1972 ಮತ್ತು 1996ರಲ್ಲಿ ಅವರು ಉಡುಪಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನ್ನ ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದ್ದರು. 1996ರಲ್ಲಿ ಅವರು ಡಾ. ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಮಧುರ ಹಾಗೂ ಅಂದು ಜನಪ್ರಿಯತೆ ಪಡೆದ ಗೀತೆಗಳನ್ನು ಹಾಡಿದ್ದರು ಎಂದು ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸ್ಮರಿಸಿಕೊಳ್ಳುತ್ತಾರೆ.

ಎಸ್‌ಪಿಬಿ ಅವರು ಮೂರನೇ ಬಾರಿಗೆ ಉಡುಪಿಗೆ ಬಂದಿದ್ದು, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರ ದ್ವಿತೀಯ ಪರ್ಯಾಯ ಸಂದರ್ಭ ದಲ್ಲಿ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಭಕ್ತಿರಸ ಮಂಜರಿ ಕಾರ್ಯಕ್ರಮ ದಲ್ಲಿ ಅವರು ಸುಮಾರು ಎರಡು ಗಂಟೆಗಳ ಕಾಲ ಪೂರ್ಣಕಾಲಿಕ ಕಾರ್ಯಕ್ರಮ ನಡೆಸಿ ಕೊಟ್ಟಿದ್ದರು.

2005ರ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಸಂಗೀತ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅದಮಾರು ಶ್ರೀಗಳು ಅವರನ್ನು ಮಠದ ವತಿಯಿಂದ ಸನ್ಮಾನಿಸಿದ್ದರು.

2016ರಲ್ಲಿ ಕೊನೆಯ ಭೇಟಿ: ಬಾಲಸುಬ್ರಹ್ಮಣ್ಯಂ ಅವರು ಕೊನೆಯ ಬಾರಿ ಉಡುಪಿಗೆ ಆಗಮಿಸಿದ್ದು 2016ರ ಜೂ.4ರಂದು. ಅದು ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ತಮ್ಮ 70ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದ ಎಸ್ಪಿಬಿ, ಹಿಂದಿರುಗುವ ಹಾದಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಶ್ರೀಕೃಷ್ಣದರ್ಶನದ ಬಳಿಕ ಅಲ್ಲೇ ಗರ್ಭಗುಡಿ ಎದುರಿನ ಚಂದ್ರಶಾಲೆ ಯಲ್ಲಿ ಕುಳಿತು ಎರಡು ಗೀತೆಗಳನ್ನು ಅವರು ಹಾಡಿದ್ದರು.

ಅದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಐದನೇ ಪರ್ಯಾಯ. ಎಸ್ಪಿಬಿ ಬರುವ ಸುದ್ದಿ ಶ್ರೀಗಳಿಗೆ ತಿಳಿದಿರಲಿಲ್ಲ. ತಿಳಿದ ತಕ್ಷಣ ಧಾವಿಸಿ ಬಂದಿದ್ದ ಪೇಜಾವರಶ್ರೀಗಳು ಅವರ ಸಂಗೀತ ಆಲಿಸಿದ್ದರಲ್ಲದೇ, ಬಳಿಕ ಬಡಗುಮಳಿಗೆಗೆ ಕರೆದೊಯ್ದು ಸನ್ಮಾನಿಸಿ ಉಪಚರಿಸಿದ್ದರು.

ಸಂತಾಪ: ಗಾನಗಂದರ್ವ ಬಾಲಸುಬ್ರಹ್ಮಣ್ಯ ಅವರ ನಿಧನಕ್ಕೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥರು ಹಾಗೂ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News