​ಸಿಸಿಬಿ ವಿಚಾರಣೆ ಎದುರಿಸಲು ಮಂಗಳೂರಿಗೆ ಆಗಮಿಸಿದ್ದ ಆ್ಯಂಕರ್ ಅನುಶ್ರೀ

Update: 2020-09-25 15:40 GMT

ಮಂಗಳೂರು, ಸೆ.25: ಮಂಗಳೂರು ಸಿಸಿಬಿ ಪೊಲೀಸರು ಆ್ಯಂಕರ್ ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗಿಲ್ಲ.

ಬೆಳಗ್ಗಿನಿಂದಲೇ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀ ಅವರನ್ನು ವಿಚಾರಣೆ ನಡೆಸಲು ಸಕಲ ಸಿದ್ಧತೆ ನಡೆಸಿದ್ದರು. ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿನಯ ಗಾಂವ್ಕರ್ ನೇತೃತ್ವದಲ್ಲಿ ಪಾಂಡೇಶ್ವರದ ನಾರ್ಕೋಟಿಕ್ ಆ್ಯಂಡ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ಸಿದ್ಧತೆ ನಡೆಸಿತ್ತು. ಆದರೆ ಅನುಶ್ರೀ ವಿಚಾರಣೆಗೆ ಆಗಮಿಸಿಲ್ಲ. ಮಂಗಳೂರಿನ ತನ್ನ ಮನೆಯಲ್ಲಿ ತಂಗಿರುವ ಅವರು ಶನಿವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಬಂಧಿತ ಆರೋಪಿಗಳು ನ್ಯಾಯಾಲಯಕ್ಕೆ: ಅನುಶ್ರೀ ವಿಚಾರಣೆಯ ಬಳಿಕ ಡ್ರಗ್ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾದ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್, ತರುಣ್ ರಾಜ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಅನುಶ್ರೀ ವಿಚಾರಣೆಗೆ ಬಾರದಿದ್ದುದರಿಂದ ಬಂಧಿತ ಆರೋಪಿಗಳನ್ನು ಇಲ್ಲಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News