ಹವಾಮಾನ ವೈಪರಿತ್ಯದಿಂದ ಹಾನಿಗೊಳಗಾದ ದೋಣಿಗಳಿಗೆ ಪರಿಹಾರಕ್ಕೆ ಸಿಎಂಗೆ ಮನವಿ

Update: 2020-09-25 17:08 GMT

ಉಡುಪಿ, ಸೆ.25: ಹವಾಮಾನ ವೈಪರಿತ್ಯ ಪರಿಣಾಮದಿಂದ ಸಂಪೂರ್ಣ ಹಾನಿಗೊಳಗಾದ ಮೀನುಗಾರಿಕೆಗೆ ತೆರಳಿದ ಬೋಟ್ ಹಾಗೂ ನಾಡ ದೋಣಿ, ಪಂಜರ ಕೃಷಿಗಳಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಲ್ಲಿ ಹಾಗೂ ವಿಶೇಷ ಪ್ರಕರಣದಡಿ ಗರಿಷ್ಟ ಪರಿಹಾರ ಮಂಜೂರು ಮಾಡು ವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಕೊರೋನ ಮಾರ್ಗಸೂಚಿಯಂತೆ ಸರಕಾರದ ಅನುಮತಿ ಪಡೆದು ಈ ಬಾರಿಯ ಮೀನುಗಾರಿಕೆ ಸೆ.1ರಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ಕಳೆದ ಹಲವು ದಿನಗಳ ಹವಾಮಾನ ವೈಪರಿತ್ಯ ಮತ್ತು ಪ್ರಾಕೃತಿಕ ವಿಕೋಪಗಳ ಪರಿಣಾಮದಿಂದ ಕರಾವಳಿ ಜಿಲ್ಲೆಯ ವಿವಿಧೆಡೆಯಿಂದ ಮೀನು ಗಾರಿಕೆಗೆ ತೆರಳಿದ್ದ ಬೋಟ್‌ಗಳು, ಲಂಗರು ಹಾಕಿದ್ದ ನಾಡದೋಣಿಗಳು ಅವಘಡಕ್ಕೆ ಒಳಗಾಗಿ ಹಾಗೂ ಪ್ರವಾಹದಿಂದ ಹಲವು ಪಂಜರ ಕೃಷಿ ಚಟುವಟಿಕೆ ಹಾನಿ ಯಾಗಿ ಸುಮಾರು 5 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶಾಸಕರಾದ ಕೆ.ರಘುಪತಿ ಭಟ್, ಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತಿಯಲ್ಲಿ ನೀಡಿದ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಕ್ತ ಪರಿಹಾರ ಮಂಜೂರು ಮಾಡಲು ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News