ಬಂಟ್ವಾಳ : ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಎಸ್.ಡಿ.ಪಿ.ಐ. ಪ್ರತಿಭಟನೆ

Update: 2020-09-25 17:36 GMT

ಬಂಟ್ವಾಳ, ಸೆ.25: ದೇಶದ ಬೆನ್ನೆಲುಬಾಗಿರುವ ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ ಅವರನ್ನು ಇನ್ನಷ್ಟು ಸಂಕಷ್ಟಗಳಿಗೆ ತಳ್ಳುವ ಹಾಗೂ ಅವರ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳ ಕೈಗೆ ನೀಡುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಯನ್ನು  ಖಂಡಿಸಿ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಬಿ.ಸಿ.ರೋಡ್ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು‌. 

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಹೊರಟಿರುವುದರೊಂದಿಗೆ ರೈತರನ್ನು ಜೀತದಾಳುಗಳನ್ನಾಗಿಸಲು ಪಣತೊಟ್ಟಿವೆ. ಗ್ರಾಮೀಣ ಪ್ರದೇಶಗಳ ಜನರು ಹಾಗೂ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುವ ಬಿಜೆಪಿ ಸರಕಾರಗಳ ದುರ್ನೀತಿಯು ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ ಆಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಬಂಡವಾಳಶಾಹಿಗಳು ಕೃಷಿ ಭೂಮಿಯನ್ನು ಖರೀದಿಸುವ ಮಿತಿಯನ್ನು ಸರಕಾರಗಳು ತೆಗೆದು ಹಾಕಿರುವುದರಿಂದ ಕೃಷಿ ಭೂಮಿಗಳು ಬಂಡವಾಳ ಶಾಹಿಗಳ ಪಾಲಾಗಿ ದೇಶದ ಕೃಷಿ ವ್ಯವಸ್ಥೆ ಸಂಪೂರ್ಣ ನಾಶವಾಗಲಿದೆ. ಸಾಲದ ಸುಳಿಯಿಂದ ತತ್ತರಿಸಿರುವ ಬಡ ರೈತರು ತಮ್ಮ ಜಮೀನು ಗಳನ್ನು ಬಲಾಢ್ಯ ಹಾಗೂ ಉಳಿಗಮಾನ್ಯರಿಗೆ ಮಾರಾಟ ಮಾಡುವುದರಿಂದ ರೈತರು ಕೃಷಿ ಕ್ಷೇತ್ರವನ್ನು ತ್ಯಜಿಸುವುದರೊಂದಿಗೆ ಜೀತದಾಳುಗಳು ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲದೆ ವಿದ್ಯುತ್ ಕಾಯ್ದೆಗೂ ತಿದ್ದುಪಡಿ ತಂದಿರುವ ರಾಜ್ಯ ಸರಕಾರ ರೈತರ ಗಾಯದ ಮೇಲೆ ಬರೆ ಎಳೆದಿದೆ. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿ ಖಾಸಗಿ ಉದ್ಯಮಿಗಳಿಗೆ ಕೃಷಿ ಉತ್ಪನ್ನ ಮಂಡಿ ಮತ್ತು ಮಾರುಕಟ್ಟೆಗಳಲ್ಲಿ ಹಿಡಿತ ಸಾಧಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕಾಯ್ದೆಯನ್ನು ಜಾರಿಗೆ ತಂದಿದೆ. ದೇಶದಾದ್ಯಂತ ರೈತ ಸಮುದಾಯದಿಂದ ತೀವ್ರತರದ ಆಕ್ಷೇಪಗಳು ಹಾಗೂ ಪ್ರತಿಭಟನೆಗಳು ವ್ಯಕ್ತವಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಸೂದೆಯನ್ನು ಅಂಗೀಕಾರ ಗೊಳಿಸಿರುವುದು ಅವುಗಳ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಎತ್ತಿ ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರಕಾರವು ವಿಧಾನಸಭಾ ಅಧಿವೇಶನವನ್ನು ಮೊಟಕುಗೊಳಿಸಿರುವುದು ಬಿಜೆಪಿ ಸರಕಾರವು ಜಾರಿಕೊಳ್ಳುವ ನೀತಿಯನ್ನು ಅವಲಂಬಿಸಿದೆ ಎನ್ನುವುದನ್ನು ತೋರಿಸುತ್ತದೆ. ಇದು ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ಸರಕಾರ ನಡೆಸಿದ ಪ್ರಹಾರವೂ ಆಗಿದೆ. ಕೋವಿಡ್ ಭೃಷ್ಟಾಚಾರ, ಆಂತರಿಕ ಕಚ್ಚಾಟ, ಆರ್ಥಿಕ ದುಸ್ಥಿತಿ, ಇತ್ಯಾದಿ ವಿಷಯಗಳನ್ನು ಎದುರಿಸಲಾಗದೆ ಅಧಿವೇಶನವನ್ನು ಮುಂದೂಡಿರುವುದು ಹೇಡಿತನದ ಕೃತ್ಯ್ಯವೂ ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ. ರಾಷ್ಟ್ರಪತಿ ಈ ಬಗ್ಗೆ ಮಧ್ಯ ಪ್ರವೇಶಿಸಿ ದೇಶದ ರೈತರ, ಕಾರ್ಮಿಕರ ವಿರೋಧಿ ಆಗಿರುವ ಯಾವುದೇ ಕಾಯ್ದೆಗಳನ್ನು ಜಾರಿ ಮಾಡದಂತೆ ತಡೆಹಿಡಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ದ.ಕ. ಸಮಿತಿ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಉಪಾಧ್ಯಕ್ಷ ಐಎಂಆರ್ ಇಕ್ಬಾಲ್ ಗೂಡಿನಬಳಿ, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಪ್ರಮುಖರಾದ ಮಲಿಕ್ ಕೊಳಕೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News