ಚೆನ್ನೈನಲ್ಲಿ ಎಸ್‌ಪಿಬಿ ಅಂತ್ಯಕ್ರಿಯೆ

Update: 2020-09-26 16:09 GMT

ಚೆನ್ನೈ, ಸೆ. 26: ಸಂಗೀತ ಲೋಕದ ದಂತಕತೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಅಭಿಮಾನಿಗಳ ಶೋಕ ಸಾಗರದ ನಡುವೆ ಸಕಲ ಸರಕಾರಿ ಗೌರವಗಳೊಂದಿಗೆ ತಿರುವಳ್ಳೂರ್ ಜಿಲ್ಲೆಯ ತಾಮರೈಪಕ್ಕಂನ ರೆಡ್‌ ಹಿಲ್ಸ್ ಫಾರ್ಮ್‌ಹೌಸ್‌ನಲ್ಲಿ ಶನಿವಾರ ನಡೆಯಿತು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.ಪಿ. ಚರಣ್ ಅವರು ಅಂತ್ಯ ಕ್ರಿಯೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.

ಎಸ್‌ಪಿಬಿ ಅವರ ಪತ್ನಿ ಸಾವಿತ್ರಿ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭ ತಮಿಳುನಾಡು ಪೊಲೀಸ್ ಸಿಬ್ಬಂದಿ ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಿದರು. ಅನಂತರ ಎಸ್‌ಪಿಬಿ ಅವರ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು. ಎಸ್‌ಪಿಬಿ ಅವರ ಪಾರ್ಥಿವ ಶರೀರವನ್ನು ಚೆನ್ನೈಯ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಿಂದ ನುಂಗಂಬಕ್ಕಾಂನ ಕಾಮ್‌ಧಾರ್ ನಗರ್‌ನಲ್ಲಿರುವ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ತರಲಾಗಿತ್ತು. ಈ ಸಂದರ್ಭ ಅನೇಕ ಮಂದಿ ರಾಜಕಾರಣಿಗಳು, ಸೆಲಬ್ರೆಟಿಗಳು, ಅಭಿಮಾನಿಗಳು ಎಸ್‌ಪಿಬಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. ಅನಂತರ ಪಾರ್ಥಿವ ಶರೀರವನ್ನು ಫಾರ್ಮ್ ಹೌಸ್‌ಗೆ ತರಲಾಗಿತ್ತು. ಫಾರ್ಮ್ ಹೌಸ್‌ಗೆ ತಮಿಳು ನಟ ವಿಜಯ್ ಭೇಟಿ ನೀಡಿ ಎಸ್‌ಪಿಬಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಅಲ್ಲದೆ, ಎಸ್‌.ಪಿ.ಬಿ ಅವರ ಪುತ್ರ ಎಸ್‌ಪಿ ಚರಣ್ ಅವರನ್ನು ಸಂತೈಸಿದರು.

ಹಿರಿಯ ನಿರ್ದೇಶಕ ಭಾರತಿರಾಜಾ, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್, ಹಾಸ್ಯನಟ ಮೈಲ್‌ಸಾಮಿ ಮೊದಲಾದವರು ಕೂಡ ಎಸ್‌ಪಿಬಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಎಐಎಡಿಎಂಕೆ ನಾಯಕ ಡಿ. ಜಯಕುಮಾರ್, ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ತಮಿಳು ಭಾಷೆ ಹಾಗೂ ಸಂಸ್ಕೃತಿ ಸಚಿವ ಪಾಂಡ್ಯ ರಾಜನ್ ಮೊದಲಾದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರಂಭದಲ್ಲಿ ಎಸ್‌ಪಿಬಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದರು. ಅನಂತರ ಅನುಮತಿ ನೀಡಿದ್ದರು. ರೆಡ್ ಹಿಲ್ಸ್ ಫಾರ್ಮ್ ಹೌಸ್‌ನ ಹೊರಗೆ ಎಸ್‌ಪಿಬಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News