ನಾನು ಯಾವುದೇ ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿಲ್ಲ: ಅನುಶ್ರೀ

Update: 2020-09-26 09:04 GMT

ಮಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರ ಎದುರು ಶನಿವಾರ ವಿಚಾರಣೆಗೆ ಹಾಜರಾಗಿದ್ದ ನಿರೂಪಕಿ ಅನುಶ್ರೀ, ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.

ಪೊಲೀಸರ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನುಶ್ರೀ, ಮಂಗಳೂರು ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿದ್ದೇನೆ. ಹಲವು ಮಾಹಿತಿಗಳನ್ನು ಈ ಸಂದರ್ಭ ಪೊಲೀಸರು ಪಡೆದುಕೊಂಡರು. ಪೊಲೀಸರು ವಿಚಾರಣೆಗೆ ಕರೆದರೆ ಪುನಃ ಬರುತ್ತೇನೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು. ಆಗ ಮಾತ್ರ ಸಮಾಜ ಸುಶಿಕ್ಷಿತವಾಗಿ ಇರಲು ಸಾಧ್ಯ ಎಂದರು.

ನಾನು ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದೇನೆ ಎನ್ನುವುದು ಸುಳ್ಳು. ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ ಎಂದು ಅನುಶ್ರೀ ಸ್ಪಷ್ಟಪಡಿಸಿದ್ದಾರೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ಆಗಮಿಸಿದ ಅನುಶ್ರೀ ವಿಚಾರಣೆಗೆ ಹಾಜರಾದರು. ಅನುಶ್ರೀ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಪಣಂಬೂರು ಠಾಣೆಗೆ ಹಾಜರಾದ ಅನುಶ್ರೀಯನ್ನು ಡಿಸಿಪಿ ವಿನಯ್ ಗಾಂವ್ಕರ್, ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಅವರ ತಂಡ ವಿಚಾರಣೆ ನಡೆಸಿದರು.

ಸಿಸಿಬಿ ಹಾಗೂ ಎಕಾನಮಿಕ್‌ ಮತ್ತು ನಾರ್ಕೊಟಿಕ್‌ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್‌ ಸೇವನೆ ಮತ್ತು ಮಾರಾಟ ಆರೋಪದಲ್ಲಿ ಡ್ಯಾನ್ಸರ್ ಕಿಶೋರ್‌ ಅಮನ್‌ ಮತ್ತು ಅಕೀಲ್‌ ನೌಶೀಲ್‌ ನನ್ನು ಬಂಧಿಸಿದ್ದರು. ಅನಂತರ ತರುಣ್‌ ಎಂಬಾತನನ್ನು ಕೂಡ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಅನುಶ್ರೀಗೆ ಇವರ ಜತೆ ನಂಟು ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ನೋಟಿಸ್‌ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News