ಮಥುರಾದಲ್ಲಿರುವ ಶಾಹಿ ಈದ್ಗಾ ಕಟ್ಟಡವನ್ನು ತೆಗೆದು ಹಾಕಲು ಕೋರ್ಟ್ ನಲ್ಲಿ ಅರ್ಜಿ

Update: 2020-09-26 09:49 GMT

ಲಕ್ನೋ: ಮಥುರಾದಲ್ಲಿರುವ ಶ್ರೀ ಕೃಷ್ಣ ದೇಗುಲ ಸಂಕೀರ್ಣದ ಪಕ್ಕದಲ್ಲಿಯೇ ಇರುವ ಶಾಹಿ ಈದ್ಗಾ ಕಟ್ಟಡವನ್ನು ತೆಗೆದು ಹಾಕಬೇಕೆಂದು ಕೋರಿ ಬಾಲ ಕೃಷ್ಣ-  ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಪರವಾಗಿ ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯವೊಂದನ್ನು ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬವರು ದಾಖಲಿಸಿದ್ದಾರೆ. ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಹಾಗೂ ಶಾಹಿ ದರ್ಗಾದ ಆಡಳಿತ ಟ್ರಸ್ಟ್ ಅನ್ನು ಈ ವ್ಯಾಜ್ಯದಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ದೇವಳದ ಪಕ್ಕದಲ್ಲಿರುವ ಮಸೀದಿಯ 13.37 ಎಕರೆ ಜಮೀನನ್ನು ದೇವಳಕ್ಕೆ ನೀಡಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.

ಶಾಹಿ ಈದ್ಗಾದ ಟ್ರಸ್ಟ್ ಕೆಲ ಮುಸ್ಲಿಮರ ಸಹಾಯದೊಂದಿಗೆ ಶ್ರೀ ಕೃಷ್ಣ ಜನ್ಮಸ್ಥಾನ ಟ್ರಸ್ಟಿಗೆ ಸೇರಿದ ಜಮೀನಿನ ಒತ್ತುವರಿ ಮಾಡಿಕೊಂಡು ಅಲ್ಲಿ ಕಟ್ಟಡ ನಿರ್ಮಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಟ್ರಸ್ಟ್ ನಿರ್ಮಿಸಿರುವ ಕಟ್ಟಡದ ಕೆಳಗೆ ಶ್ರೀ ಕೃಷ್ಣನ ಜನ್ಮಸ್ಥಾನವಿದೆ ಎಂದೂ ಅದರಲ್ಲಿ ಹೇಳಲಾಗಿದೆ.

ಮಥುರಾ ದೇವಳದ ಆಡಳಿತ ನಿರ್ವಹಿಸುವ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನವು ಈ ನಿರ್ದಿಷ್ಟ ಜಮೀನನ್ನು ಕಬಳಿಸುವ ಉದ್ದೇಶದಿಂದ ಶಾಹಿ ದರ್ಗಾ ಟ್ರಸ್ಟ್ ಜತೆಗೆ ಅಕ್ರಮವಾಗಿ ಹೊಂದಾಣಿಕೆ ಮಾಡಿತ್ತು ಎಂದೂ ಆರೋಪಿಸಲಾಗಿದೆಯಲ್ಲದೆ ಸೇವಾ ಸಂಸ್ಥಾನವು ಶ್ರೀ ಕೃಷ್ಣನ ಹಾಗೂ ಭಕ್ತರ ಹಿತಾಸಕ್ತಿಗಳ ವಿರುದ್ಧ ಕಾರ್ಯನಿರ್ವಹಿಸುತ್ತಿದೆ ಎಂದು ದೂರಲಾಗಿದೆ. ಈ ನಿರ್ದಿಷ್ಟ ಹೊಂದಾಣಿಕೆ ಕುರಿತಾದ ಪ್ರಕರಣದಲ್ಲಿ ಮಥುರಾ ನ್ಯಾಯಾಲಯವು ಜುಲೈ 20, 1973ರಂದು ನೀಡಿದ ತೀರ್ಪನ್ನು ರದ್ದುಗೊಳಸಿಬೇಕೆಂದೂ ಪ್ರಸಕ್ತ ಅಪೀಲಿನಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News