ಸೆ.28ರ ಕರ್ನಾಟಕ ಬಂದ್‌ಗೆ ಉಡುಪಿ ಜಿಲ್ಲೆಯ 14 ಸಂಘಟನೆಗಳಿಂದ ಬೆಂಬಲ ಘೋಷಣೆ

Update: 2020-09-26 11:40 GMT

ಉಡುಪಿ, ಸೆ. 26: ರೈತ ವಿರೋಧಿ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ. 28ರಂದು ನಡೆಸಲು ಉದ್ದೇಶಿಸಿರುವ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ಗೆ ಉಡುಪಿ ಜಿಲ್ಲೆಯ 14 ಸಂಘಟನೆಗಳು ಬೆಂಬಲ ಘೋಷಿಸಿದೆ.

ಉಡುಪಿ ಸಭೆ ಸೇರಿದ ಕಾಂಗ್ರೆಸ್ ಕಿಸಾನ್ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜಾತ್ಯತೀತ ಜನತಾದಳ, ದಲಿತ ಸಂಘರ್ಷ ಸಮಿತಿ, ಸಿಪಿಐಎಂ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸಹಬಾಳ್ವೆ ಉಡುಪಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಕರ್ನಾಟಕ ರಾಷ್ಟ್ರ ಸಮಿತಿ, ಸಿಐಟಿಯು, ಭಾರತೀಯ ಕ್ರಿಶ್ಟಿಯನ್ ಒಕ್ಕೂಟ, ಅಂಬೇಡ್ಕರ್ ಸೇನೆ ಸಂಘಟನೆಗಳು, ಈ ಬಂದ್ ಬೆಂಬಲಿಸಲು ನಿರ್ಧರಿಸಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಈ ನೀತಿಗಳು ಜನಸಾಮಾನ್ಯರನ್ನು ಬಾಧಿಸುವುದರಿಂದ ಉಡುಪಿ ಜಿಲ್ಲೆಯ ರೈತರು, ಕಾರ್ಮಿಕರು, ವ್ಯಾಪಾರಿಗಳು, ಬಸ್ ಮಾಲಕರು ಮತ್ತು ನೌಕರರು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ, ಸರಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.

ಸೆ.28ರಂದು ಬೆಳಗ್ಗೆ 6ಗಂಟೆಗೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಈ ಸಂಘಟನೆಗಳ ಪದಾಧಿಕಾರಿಗಳು ಸೇರಿ ನಗರದಾದ್ಯಂತ ಮೆರವಣಿಗೆಯ ಮೂಲಕ ತೆರಳಿ ಬಂದ್ ಬೆಂಬಲ ನೀಡುವಂತೆ ವ್ಯಾಪಾರಸ್ಥರು ಹಾಗೂ ಸಾರ್ವ ಜನಿಕರನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.

ಕಾಯಿದೆಗಳ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರಕಾರ ರೈತಾಪಿ ಕೃಷಿ ನಾಶ ಮಾಡಿ, ಕಂಪೆನಿ ಕೃಷಿಯನ್ನು ಜಾರಿಗೆ ತರಲು ಹೊರಟಿದೆ. ಖಾಸಗೀಕರಣಗೊಳಿಸುವ ಉದ್ದೇಶದಿಂದ ವಿದ್ಯುತ್ ಕಾಯಿದೆ ಜಾರಿಗೆ ತರ ಲಾಗುತ್ತಿದೆ. ಇದು ಜಾರಿಯಾದರೆ ನೀರಾವರಿ ಪಂಪ್‌ಸೆಟ್‌ಗಳಿಗೂ ಮೀಟರ್ ಕಡ್ಡಾಯ ಮಾಡಲಾಗುತ್ತದೆ ಮತ್ತು ಉಚಿತ ವಿದ್ಯುತನ್ನು ನಿಲ್ಲಿಸಲಾಗುತ್ತದೆ. ಸರಕಾರದ ಈ ನೀತಿಗಳು ದೇಶದ ಕೃಷಿ, ಆಹಾರ ಭದ್ರತೆ, ಸ್ವಾವಂಬನೆಯನ್ನು ನಾಶ ಮಾಡುತ್ತವೆ ಮತ್ತು ಇದರಿಂದ ಬಹುಸಂಖ್ಯಾತರು ಹಸಿವು, ಬಡತನ ನಿರುದ್ಯೋಗವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಿಸಾನ್ ಘಟಕದ ಶಶಿಧರ್ ಶೆಟ್ಟಿ ಎರ್ಮಾಳ್, ಪ್ರಾಂತ ರೈತ ಸಂಘದ ಶಶಿಧರ್ ಗೊಲ್ಲ, ಕಾಂಗ್ರೆಸ್ ಮುಖಂಡ ಕುಶಲ್ ಶೆಟ್ಟಿ, ಜೆಡಿಎಸ್‌ನ ಯೋಗೀಶ್ ಶೆಟ್ಟಿ, ದಸಂಸ ಮುಖಂಡ ಸುಂದರ್ ಮಾಸ್ಟರ್, ವೆಲ್ಫೇರ್ ಪಾರ್ಟಿಯ ಅಬ್ದುಲ್ ಅಝೀಝ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಯಾಸೀನ್ ಮಲ್ಪೆ, ಕರ್ನಾಟಕ ರಾಷ್ಟ್ರ ಸಮಿತಿಯ ವಿನುತ ಕಿರಣ್, ಸಿಐಟಿಯು ಕವಿರಾಜ್, ಕ್ರಿಶ್ಟಿಯನ್ ಒಕ್ಕೂಟದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News