ಜಿಎಸ್‌ಟಿ ಪರಿಹಾರವನ್ನು ಅನ್ಯಕಾರ್ಯಕ್ಕೆ ಬಳಸಿಕೊಂಡಿಲ್ಲ: ಸಿಎಜಿ ವರದಿಯ ಬಳಿಕ ಕೇಂದ್ರದ ಹೇಳಿಕೆ

Update: 2020-09-26 12:56 GMT

ಹೊಸದಿಲ್ಲಿ,ಸೆ.26: ಜಿಎಸ್‌ಟಿ ಪರಿಹಾರ ಮೇಲ್ತೆರಿಗೆ ನಿಧಿಯಿಂದ 42,271 ಕೋ.ರೂ.ಗಳನ್ನು ಅನ್ಯಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಕೇಂದ್ರ ವಿತ್ತ ಸಚಿವಾಲಯವು,2017-18 ಮತ್ತು 2018-19ನೇ ಸಾಲುಗಳಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲ್ಲಬೇಕಿದ್ದ ಪರಿಹಾರದ ಹಣವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಹೇಳಿದೆ. ಜಿಎಸ್‌ಟಿ ಪರಿಹಾರ ಮೇಲ್ತೆರಿಗೆ ನಿಧಿಯು ರದ್ದುಗೊಳ್ಳದ ನಿಧಿಯಾಗಿದ್ದು,ಜಿಎಸ್‌ಟಿ ಮೇಲ್ತೆರಿಗೆಯನ್ನು ಈ ನಿಧಿಗೆ ವರ್ಗಾವಣೆಗೊಳಿಸಲಾಗುತ್ತದೆ ಮತ್ತು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಈ ನಿಧಿಯಿಂದ ಪಾವತಿಸಲಾಗುತ್ತದೆ. ಪರಿಹಾರ ಸಲ್ಲಿಕೆಗಳ ಮರುಹೊಂದಾಣಿಕೆಯಲ್ಲಿ ವಿಳಂಬವಾಗಿದೆ ಮತ್ತು ಕೇಂದ್ರ ಸರಕಾರವು ಪರಿಹಾರದ ಹಣವನ್ನು ಪೂರ್ಣವಾಗಿ ಬಿಡುಗಡೆ ಮಾಡಿರುವಾಗ ಅನ್ಯಕಾರ್ಯಗಳಿಗೆ ನಿಧಿಯ ಬಳಕೆಯಾಗಿದೆ ಎಂದು ಹೇಳುವಂತಿಲ್ಲ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ಸರಕಾರವು ಸುಮಾರು 42,000 ಕೋ.ರೂ.ಗಳ ಜಿಎಸ್‌ಟಿ ಪರಿಹಾರ ಮೇಲ್ತೆರಿಗೆಯನ್ನು ತನ್ನ ಬಳಿಯೇ ಉಳಿಸಿಕೊಂಡು ತಪ್ಪೆಸಗಿದೆ ಎಂದು ಸಿಎಜಿ ವರದಿಯು ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ಪರಿಹಾರ ಮೇಲ್ತೆರಿಗೆ ನಿಧಿಯ ಕುರಿತು ಪ್ರಶ್ನೆಗಳೆದ್ದಿವೆ.

ಕಾನೂನಿನಂತೆ ಆಯಾ ವರ್ಷದಲ್ಲಿ ಜಿಎಸ್‌ಟಿ ಮೇಲ್ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಹಣವನ್ನು ಆದಾಯ ನಷ್ಟಕ್ಕೆ ಪರಿಹಾರವನ್ನಾಗಿ ರಾಜ್ಯಗಳಿಗೆ ವಿತರಿಸಲು ಜಿಎಸ್‌ಟಿ ಪರಿಹಾರ ಮೇಲ್ತರಿಗೆ ನಿಧಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಸಿಎಜಿ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.

 ಆದರೆ ಕಾನೂನಿನಂತೆ ತೆರಿಗೆಗಳು ಮತ್ತು ಮೇಲ್ತೆರಿಗೆಗಳು ಸೇರಿದಂತೆ ಎಲ್ಲ ಮೊತ್ತಗಳನ್ನು ಮೊದಲು ಭಾರತದ ಸಂವಿಧಾನ ನಿಧಿ (ಸಿಎಫ್‌ಐ)ಗೆ ಜಮೆ ಮಾಡಬೇಕಾಗುತ್ತದೆ ಮತ್ತು ನಂತರವಷ್ಟೇ ಅದನ್ನು ವರ್ಗಾಯಿಸಬಹುದು ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ಸಂಗ್ರಹಗೊಂಡ ಅಂತಿಮ ಮೊತ್ತವು ಹಣಕಾಸು ವರ್ಷದ ಅಂತ್ಯದಲ್ಲಿಯಷ್ಟೇ ಗೊತ್ತಾಗುವುದರಿಂದ ಅಂದಾಜು ಸಂಗ್ರಹಕ್ಕಿಂತ ಹೆಚ್ಚಿನ ಹಣವು ತಾತ್ಕಾಲಿಕವಾಗಿ ಭಾರತದ ಸಂಚಿತ ನಿಧಿಯಲ್ಲಿ ಉಳಿದುಕೊಳ್ಳುತ್ತದೆ. ಆದ್ದರಿಂದ ಮರುಹೊಂದಾಣಿಕೆ ಬಾಕಿಯಿರುವಂತೆ ಸಿಎಫ್‌ಐನಲ್ಲಿ ಇಂತಹ ತಾತ್ಕಾಲಿಕ ಜಮೆಯನ್ನು ಹಣ ಅನ್ಯಕಾರ್ಯಕ್ಕೆ ಬಳಕೆಯಾಗಿದೆ ಎಂದು ಅರ್ಥೈಸುವಂತಿಲ್ಲ ಎಂದು ಅವು ಹೇಳಿವೆ.

ಹಣವನ್ನು ಅನ್ಯಕಾರ್ಯಕ್ಕೆ ಬಳಸಲಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿಲ್ಲ,ಆದರೆ ಮರುಹೊಂದಾಣಿಕೆಯಲ್ಲಿ ತಪ್ಪಾಗಿದೆ ಎಂದಷ್ಟೇ ಹೇಳಿದೆ ಎಂದೂ ವಿತ್ತ ಸಚಿವಾಲಯವು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News