​ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಸ್ಪಷ್ಟೀಕರಣ

Update: 2020-09-26 14:46 GMT

ಉಡುಪಿ, ಸೆ.26: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ಎಸ್. ನಾಗಣ್ಣ ಅವರು ತನ್ನ ವಿರುದ್ಧ ಉಡುಪಿ ನಗರ ಪೋಲಿಸ್ ಠಾಣೆಗೆ ನೀಡಿರುವ ದೂರು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ನನ್ನ ಮಾನಹಾನಿ ಹಾಗೂ ತೇಜೋವಧೆಗೆ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿರುವ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.

ರೆಡ್‌ಕ್ರಾಸ್ ಜಿಲ್ಲಾ ಘಟಕದ ಹಿಂದಿನ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ 2016ರ ಮಾ.26ರಂದು ಆಡಳಿತ ಮಂಡಳಿಯ ಅವಿರೋಧ ನಿರ್ಣಯ ಹಾಗೂ ಜಿಲ್ಲಾಧಿಕಾರಿಗಳ ಸಲಹೆ ಮತ್ತು ಆದೇಶದ ಪ್ರಕಾರವೇ ಸಂಸ್ಥೆಯ ಮುಂದಿನ ಸರ್ವಾಂಗೀಣ ಅಭಿವೃದ್ದಿಗಾಗಿ ತನ್ನ ಸಂಸ್ಥೆಯ ಸ್ವಂತ ಸ್ಥಳದಲ್ಲಿ ವಿಕಲಾಂಗ ಚೇತನ ಮಕ್ಕಳಿಗಾಗಿ ವಿಶೇಷ ಶಾಲೆ, ಹಿರಿಯ ನಾಗರಿಕ ರಿಗಾಗಿ ವಸತಿ ಗೃಹ ಮತ್ತು ರಕ್ತನಿಧಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿತ್ತು.

ಇದಕ್ಕಾಗಿ ಸುಮಾರು 3.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಟ್ಟಡಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹದ ಉದ್ದೇಶದಿಂದ ಆದಾಯ ತೆರಿಗೆ ವಿನಾಯಿತಿಗಾಗಿ 80ಜಿ ಮತ್ತು 12ಎ ಪಡೆಯುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಸಂಸ್ಥೆಯ ಲೆಕ್ಕ ಪರಿಶೋಧಕರಿಂದ ಸಲಹೆ ಸೂಚನೆಯನ್ನು ಪಡೆದು ಕಾನೂನಿನ ಪ್ರಕಾರವೇ ಅನುಷ್ಠಾನ ಮಾಡುವ ಬಗ್ಗೆ ಈ ವರ್ಷದ ಜ.4ರಂದು ಆಡಳಿತ ಮಂಡಳಿಯ ಸರ್ವಾನುಮತದ ಒಪ್ಪಿಗೆ ಪಡೆದು ನಿಯಮಾನುಸಾರ ಐದು ಮಂದಿಯ ಆಡಳಿತ ಮಂಡಳಿಯನ್ನು ರಚಿಸಲಾಗಿತ್ತು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಯೊಬ್ಬರ ಅಗತ್ಯ ಎಲ್ಲಾ ದಾಖಲೆಗಳೊಂದಿಗೆ 5000 ರೂ.ವನ್ನು ಮಾತ್ರ ದೇಣಿಗೆ ಮೂಲಕ ಪಡೆದು ಬ್ಯಾಂಕಿನ ಕಾನೂನಿನ ಪ್ರಕಾರವೇ ಈ ಖಾತೆಗೆ ಮಾ.5ರಂದು ಒಟ್ಟು 41,000ರೂ.ಗಳನ್ನು ಖಾತೆಗೆ ಜಮಾ ಮಾಡಲಾಗಿತ್ತು. ಅನಂತರ ಯಾವುದೇ ಒಂದು ವಹಿವಾಟು ನಡೆಸದೇ, ಸೆ.8ರಂದು ಟ್ರಸ್ಟ್ ಡೀಡ್ ಮತ್ತು ಈ ಖಾತೆಯನ್ನು ಬರ್ಕಾಸ್ತುಗೊಳಿಸಿ ರೆಡ್‌ಕ್ರಾಸ್ ಮೂಲ ಖಾತೆಗೆ ಜಮಾ ಮಾಡಲಾಗಿದೆ. ಇದುವರೆಗೆ ಸಂಸ್ಥೆಗೆ ಯಾರಿಂದಲೂ ಹಣ ಸಂಗ್ರಹಿಸಿಲ್ಲ. ಯಾವುದೇ ದುರುದ್ದೇಶದಿಂದ ಚಿಹ್ನೆ ಮತ್ತು ಟ್ರೇಡ್ ಮಾರ್ಕ್ ಬಳಸದೇ, ಯಾವುದೇ ಅವ್ಯವಹಾರ ಅಥವಾ ವಂಚಿಸುವ ಉದ್ದೇಶವನ್ನು ನಾನಾಗಲೀ, ಸಂಸ್ಥೆಯಾಗಲಿ ಹೊಂದಿಲ್ಲ ಎಂದು ರಾಜೀವ್ ಶೆಟ್ಟಿ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News