​‘ಕೇಂದ್ರ, ರಾಜ್ಯ ಸರಕಾರಗಳ ರೈತ ವಿರೋಧಿ ನಿಲುವು ಖಂಡನೀಯ’

Update: 2020-09-26 14:47 GMT

ಉಡುಪಿ, ಸೆ. 26: ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಇದ್ದ ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವಾಗಲು ಕೇಂದ್ರ ಸರಕಾರ ಕೃಷಿ ವಿಧೇಯಕವನ್ನು ಜಾರಿಗೆ ತಂದಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಎಪಿಎಂಸಿ ತಿದ್ದುಪಡಿ ಮಸೂದೆಯಲ್ಲಿ ರೈತ ಬೆಳೆಸಿದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಯಾವುದೇ ಖಾತ್ರಿ ನೀಡಿಲ್ಲ. ಬೆಂಬಲ ಬೆಲೆ ವ್ಯವಸ್ಥೆಗೆ ಏನೂ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ಹೇಳುತಿದ್ದರೂ, ಕಾನೂನಿನಲ್ಲಿ ಇದನ್ನು ಸೇರ್ಪಡೆ ಮಾಡಬೇಕಾಗಿದೆ. ಕೇಂದ್ರ ಖಾತ್ರಿ ನೀಡದೆ ಹೋದರೆ ನೂತನ ವಿಧೇಯಕದಿಂದ ರೈತನಿಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ವಿಶೇಷವಾಗಿ ಬಡವರ ಆಹಾರ ಭದ್ರತೆಯ ಬೀಗದ ಕೈ ಕಾರ್ಪೋರೇಟ್ ಕುಳಗಳ ಕೈ ಸೇರುತ್ತದೆ. ಕಾರ್ಪೋರೇಟ್ ಸಂಸ್ಥೆಗಳು ನೇರ ಖರೀದಿ ಮಾಡುವು ದರಿಂದ ಸರಕಾರಿ ಎಪಿಎಂಸಿ ಬಂದ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ಕಾಯಿದೆಯಲ್ಲಿ ದೊಡ್ಡ ದೊಡ್ಡ ವ್ಯಾಪಾರಿಗಳು ಗುಂಪು ಕೂಡಿ ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ರೈತರ ಬೆಳೆಗಳಿಗೆ ನ್ಯಾಯಯುತ ವಾದ ಬೆಲೆ ದೊರಕಲಾರದು. ಕಾರ್ಪೋರೇಟ್ ಸಂಸ್ಥೆಗಳ ಉದ್ದೇಶ ಲಾಭ ಮಾಡಿಕೊಳ್ಳು ವುದೇ ಹೊರತು ರೈತರಿಗೆ ಸಹಾಯ ಮಾಡಬೇಕು ಎಂಬುದಲ್ಲ. ಇದರಿಂದ ರೈತನ ಜೊತೆ ಜನಸಾಮಾನ್ಯನಿಗೂ ಕೃಷಿ ಉತ್ಪನ್ನಗಳ ಖರೀದಿ ಸಮಯದಲ್ಲಿ ಬಿಸಿ ತಟ್ಟುವುದರಲ್ಲಿ ಸಂಶಯವಿಲ್ಲ. ಬಂಡವಾಳ ಶಾಹಿಗಳು ಮಾರುಕಟ್ಟೆ ಹಾಗೂ ಬೆಲೆಯ ಮೇಲೆ, ಖರೀದಿ, ದಾಸ್ತಾನು ಹಾಗೂ ಪೂರೈಕೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರೆ ರೈತರು ಮತ್ತಷ್ಟು ಅಸಹಾಯಕರಾಗುತ್ತಾರೆ.

ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಏಕಸ್ವಾಮ್ಯವಿದೆ ಎಂದಾದರೆ ಕೇಂದ್ರ ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಲೋಚಿಸಬೇಕಿತ್ತೇ ಹೊರತು ಕಾರ್ಪೋರೇಟ್ ಕುಳಗಳಿಗೆ ಪೂರಕವಾಗಿ ಎಪಿಎಂಸಿ ಮಸೂದೆಯನ್ನು ತಂದಿರು ವುದು ರೈತರನ್ನು ಇನ್ನ್ಟು ಸಂಕಷ್ಟಗಳಿಗೆ ದೂಡಿದಂತಾಗಿದೆ. ಮಸೂದೆಯ ಲಾಭ ಪಡೆಯಲು ಕಾರ್ಪೋರೇಟ್ ಸಂಸ್ಥೆಗಳು ಕೃಷಿಕರಿಗೆ ಬೆಳೆಗೆ ಮುಂಚಿತವಾಗಿ ಮುಂಗಡ ಹಣ ನೀಡು ತ್ತಾರೆ. ಸಾಲ ಕೊಟ್ಟ ಮೇಲೆ ರೈತರು ಬೆಳೆಯುವ ಕೃಷಿ ಉತ್ಪನ್ನಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ರೈತ ತಾನು ಬೆಳೆದ ಬೆಳೆಗೆ ತನ್ನ ಮಾರಾಟ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಮುಂಗಡ ಹಣ ಪಡೆದು ಕೃಷಿ ಮಾಡಿದ ರೈತನ ಬೆಳೆ ಯಾವುದಾದರೂ ಕಾರಣದಿಂದ ನಾಶವಾದರೆ ಆಗ ಕಾರ್ಪೋರೇಟ್ ಸಂಸ್ಥೆಗಳು ತಾವು ಕೊಟ್ಟ ಹಣಕ್ಕೆ ರೈತನ ಜಮೀನನ್ನು ವಶ ಪಡಿಸಿಕೊಳ್ಳುವ ದಿನವೂ ಬರುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News