ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಕುರಿತ ಇಮ್ರಾನ್ ಖಾನ್ ಭಾಷಣಕ್ಕೆ ಭಾರತ ತಿರುಗೇಟು

Update: 2020-09-26 15:33 GMT

ನ್ಯೂಯಾರ್ಕ್, ಸೆ. 26: ವಿಶ್ವಸಂಸ್ಥೆಯ 75ನೇ ಮಹಾಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಗಂಟೆಗಳ ಬಳಿಕ, ತನ್ನ ಉತ್ತರ ನೀಡುವ ಹಕ್ಕನ್ನು ಚಲಾಯಿಸಿದ ಭಾರತ, ಪಾಕಿಸ್ತಾನದ ಆರೋಪಗಳಿಗೆ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಮಿಜಿಟೊ ವಿನಿಟೊ ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವನ್ನು ಪ್ರತಿಪಾದಿಸಿದರು. ಇದಕ್ಕೂ ಮೊದಲು, ಇಮ್ರಾನ್ ಖಾನ್‌ರ ಪೂರ್ವ ಮುದ್ರಿತ ವೀಡಿಯೊವನ್ನು ವಿಶ್ವಸಂಸ್ಥೆಯಲ್ಲಿ ಪ್ರದರ್ಶಿಸಿದಾಗ ಅವರು ಸಭಾತ್ಯಾಗ ಮಾಡಿದ್ದರು.

‘‘ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರವು ಭಾರತದ ಸಮಗ್ರ ಹಾಗೂ ಪ್ರತ್ಯೇಕಿಸಲಾಗದ ಭಾಗವಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ತರಲಾಗಿರುವ ನಿಯಮಗಳು ಮತ್ತು ಕಾನೂನುಗಳು ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರಗಳಾಗಿವೆ’’ ಎಂದು ಭಾರತವು ಕಟು ಮಾತುಗಳಲ್ಲಿ ಹೇಳಿದೆ.

ಇದಕ್ಕೂ ಮೊದಲು, ಇ್ರಮ್ರಾನ್ ಖಾನ್ ತನ್ನ ಭಾಷಣದಲ್ಲಿ, ‘‘ಪಾಕಿಸ್ತಾನವು ಹಿಂದಿನಿಂದಲೂ ಶಾಂತಿಯುತ ಪರಿಹಾರವನ್ನು ಬಯಸುತ್ತಾ ಬಂದಿದೆ. ಇದನ್ನು ಸಾಧಿಸುವುದಕ್ಕಾಗಿ ಭಾರತವು 2019 ಆಗಸ್ಟ್ 5ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದಿರುವ ಕ್ರಮಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು’’ ಎಂದು ಹೇಳಿದ್ದರು.

ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ, ‘‘ಕಾಶ್ಮೀರದಲ್ಲಿ ಈಗ ಬಾಕಿಯಿರುವ ಒಂದೇ ಒಂದು ವಿವಾದವೆಂದರೆ, ಅದರ ಒಂದು ಭಾಗವು ಈಗಲೂ ಪಾಕಿಸ್ತಾನದ ಅಕ್ರಮ ಅತಿಕ್ರಮಣದಲ್ಲಿ ಮುಂದುವರಿದಿರುವುದು. ತನ್ನ ಅಕ್ರಮ ಅತಿಕ್ರಮಣದಲ್ಲಿರುವ ಎಲ್ಲ ಜಮೀನುಗಳನ್ನು ತೆರವುಗೊಳಿಸುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News