ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳನ್ನು ಮನೆಗೆ ಮರಳಿಸಲು ಎನ್‌ಸಿಪಿಆರ್ ಸೂಚನೆ

Update: 2020-09-26 15:49 GMT

ಹೊಸದಿಲ್ಲಿ, ಸೆ.26: ಶಿಶು ಪಾಲನಾ ಕೇಂದ್ರಗಳಲ್ಲಿ ನೆಲೆಸಿರುವ ಮಕ್ಕಳನ್ನು ಅವರ ಮನೆಗೆ ಮರಳಿಸಲು ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕಿನ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ(ಎನ್‌ಸಿಪಿಆರ್) ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಸೂಚಿಸಿದ್ದು, ಕೌಟುಂಬಿಕ ಪರಿಸರದಲ್ಲಿ ಬೆಳೆಯುವುದು ಪ್ರತಿಯೊಂದೂ ಮಕ್ಕಳ ಹಕ್ಕಾಗಿದೆ ಎಂದಿದೆ. ಶಿಶು ಪಾಲನಾ ಕೇಂದ್ರಗಳಲ್ಲಿ ನೆಲೆಸಿರುವ ಮಕ್ಕಳ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ದೇಶದಲ್ಲಿ ಶಿಶು ಪಾಲನಾ ಕೇಂದ್ರಗಳಲ್ಲಿ ನೆಲೆಸಿರುವ ಒಟ್ಟು ಮಕ್ಕಳಲ್ಲಿ ಸುಮಾರು 72 ಶೇ. ದಷ್ಟು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಿಝೋರಾಂ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಮೇಘಾಲಯ - ಈ ಎಂಟು ರಾಜ್ಯಗಳಲ್ಲಿದ್ದಾರೆ. ದೇಶದಲ್ಲಿ ಶಿಶು ಪಾಲನಾ ಕೇಂದ್ರದಲ್ಲಿ ನೆಲೆಸಿರುವ ಒಟ್ಟು 2.56 ಲಕ್ಷ ಮಕ್ಕಳಲ್ಲಿ 1.84 ಲಕ್ಷ ಮಕ್ಕಳು ಈ ಎಂಟು ರಾಜ್ಯಗಳಲ್ಲಿದ್ದಾರೆ ಎಂದು ಆಯೋಗ ತಿಳಿಸಿದೆ.

ಶಿಶು ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಹಂತಹಂತವಾಗಿ ನಡೆಯಲಿದ್ದು 8 ರಾಜ್ಯಗಳಲ್ಲಿ ಆರಂಭಿಸಲಾಗಿದೆ. ಮನೆಗೆ ಕಳುಹಿಸಲಾಗದ ಮಕ್ಕಳನ್ನು ಅನಾಥಾಶ್ರಮ ಅಥವಾ ದತ್ತು ಸ್ವೀಕಾರ ಕೇಂದ್ರಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ. 100 ದಿನದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಬಾಲ ನ್ಯಾಯ ಕಾಯ್ದೆಯ ಪ್ರಕಾರ, ಮಕ್ಕಳು ಕೌಟುಂಬಿಕ ಪರಿಸರದಲ್ಲೇ ಬೆಳೆಯಬೇಕು ಮತ್ತು ಬೇರೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲದಿದ್ದರೆ ಮಾತ್ರ ಅವರನ್ನು ಆರೈಕೆ ಕೇಂದ್ರದಲ್ಲಿ ಇರಿಸಬೇಕು ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನ್ನೂಂಗೊ ಹೇಳಿದ್ದಾರೆ. ಬಡ ಕುಟುಂಬದ ಕೆಲವು ಮಕ್ಕಳನ್ನು ಆರೈಕೆ ಕೇಂದ್ರದಲ್ಲಿ ಇರಿಸುವಂತೆ ದಕ್ಷಿಣ ಭಾರತದ ಕೆಲವು ಮಕ್ಕಳ ಕಲ್ಯಾಣ ಸಮಿತಿಗಳು ಆದೇಶಿಸುತ್ತಿರುವುದನ್ನು ಗಮನಿಸಲಾಗಿದೆ. ಬಡತನದ ಕಾರಣದಿಂದ ಮಕ್ಕಳ ಹಕ್ಕನ್ನು ಕಸಿದುಕೊಳ್ಳಲಾಗದು. ಕುಟುಂಬದ ಬಡತನದಿಂದ ಮಕ್ಕಳು ಪಾಲನಾ ಕೇಂದ್ರಕ್ಕೆ ದಾಖಲಾಗುವುದು ಆಯಾ ರಾಜ್ಯದ ವೈಫಲ್ಯವಾಗಿದೆ. ಇಂತಹ ಕುಟುಂಬಗಳನ್ನು ಸಶಕ್ತಗೊಳಿಸುವುದು ಈ ರಾಜ್ಯಗಳ ಕರ್ತವ್ಯವಾಗಿದೆ ಎಂದು ಪ್ರಿಯಾಂಕ್ ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News