×
Ad

ಹೆಜಮಾಡಿಯ : ಎಮ್‌ಬಿಸಿ ರಸ್ತೆ ಟೋಲ್‌ಪ್ಲಾಝಾ ತೆರವಿಗೆ ಆಗ್ರಹ

Update: 2020-09-26 21:40 IST

ಪಡುಬಿದ್ರಿ : ಹೆಜಮಾಡಿಯ ಹಳೇ ಎಮ್‌ಬಿಸಿ ರಸ್ತೆಯಲ್ಲಿ ನವಯುಗ್ ಟೋಲ್ ಕಂಪನಿಯು ನಿರ್ಮಿಸಿರುವ ಟೋಲ್ ವಸೂಲಾತಿ ಕೇಂದ್ರವು ಕಾನೂನು ಬಾಹಿರವಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಹೆಜಮಾಡಿಯ ವಿವಿಧ ಸಂಘಟನೆಗಳು ಆಗ್ರಹಿಸಿದೆ.

ಈ ಬಗ್ಗೆ ಹೆಜಮಾಡಿಯ ಇಪ್ಪತ್ತು ಸಂಘ ಸಂಸ್ಥೆಗಳು ಲೋಕೋಪಯೋಗಿ ಇಲಾಖೆಗೆ ಸಹಿತ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಎಲ್ಲರೂ ಈ ಸಬ್ ಟೋಲನ್ನು ತೆರವು ಗೊಳಿಸಿ ಜನರಿಗಾಗುವ ಕಷ್ಟನಷ್ಟಗಳನ್ನು ನಿವಾರಿಸಬೇಕೆಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ.

ಸುಂಕ ವಸೂಲಾತಿಯ ಗುತ್ತಿಗೆದಾರರಾದ ನವಯುಗ ಉಡುಪಿ ಟೋಲ್ ವೇ ಪ್ರೈವೇಟ್ ಲಿಮಿಟೆಡ್ ನವರು ಕರ್ನಾಟಕ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಸೇರಿದ ಮುಖ್ಯ ರಸ್ತೆಯಾದ ಹೆಜಮಾಡಿ ಹಳೇ ಎಂಬಿಸಿ ರಸ್ತೆಯ ಜಾಗದಲ್ಲಿ (ರಾಷ್ಟ್ರೀಯ ಹೆದ್ದಾರಿಯಿಂದ ಹಜಮಾಡಿ ಸರ್ವೀಸ್ ಬಸ್ ಸ್ಟ್ಯಾಂಡ್‌ಗೆ ಹಾದು ಹೋಗುವಲ್ಲಿ) ಸುಂಕ ವಸೂಲಾತಿಗೆ ತಡೆ ನಿರ್ಮಾಣವನ್ನು ಇಲಾಖೆಯ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಸ್ಥಾಪಿಸಿ ಹೆಜಮಾಡಿಯ ಗ್ರಾಮಸ್ಥರಿಗೆ ಮತ್ತು ಹೆಜಮಾಡಿ ಕೋಡಿ ಹಾಗೂ ಸಮುದ್ರ ಕರಾವಳಿಯ ಜನತೆಗೆ ತೊಂದರೆ ಯುಂಟು ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಖ್ಯಟೋಲ್‌ಗೇಟ್ ಸ್ಥಾಪಿಸಿರುವುದು ಅವೈಜ್ಞಾಕವಾಗಿದ್ದು, ಅದರ ಪರಿಣಾಮದಿಂದ ಈ ಭಾಗದಲ್ಲಿ ಬಹು ಸಂಖ್ಯೆ ಯಲ್ಲಿ ವಾಸಿಸುತ್ತಿರುವ ಬಿಲ್ಲವ, ಮೊಗವೀರ, ಮುಸ್ಲಿಂ, ದಲಿತರು, ಹಿಂದುಳಿದವರು ಕಷ್ಟನಷ್ಟ ವನ್ನು ಅನುಭವಿಸುವಂತಾಗಿದೆ. ಈ ಭಾಗದ ಮೀನುಗಾರರು ಮಾಡುತ್ತಿರುವ ಮೀನಿನ ವ್ಯಾಪಾರಕ್ಕೆ ಹೊರಗಿನ ಪ್ರದೇಶದಿಂದ ವಾಹನಗಳಲ್ಲಿ ಬರುವ ಖರೀದಿದಾರರು ಸುಂಕ ತೆರಬೇಕಾದು ದರಿಂದ ಸಮುದಾಯದ ಜನರಿಗೆ ತೊಂದರೆಯುಂತಾಗುತ್ತಿದೆ. ಸಣ್ಣ ಕಾಮಗಾರಿಗಳಿಗೂ ಕಷ್ಟನಷ್ಟಗಳಾಗುತ್ತಿವೆ. ಹೆಜಮಾಡಿ, ನಡಿಕುದ್ರು ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಹಲವು ಮಂದಿರ, ಮಸೀದಿ, ಭೂತ ದೈವಸ್ಥಾನ, ಕುಟುಂಬ ಮೂಲಸ್ಥಾನಗಳಿವೆ. ಇಲ್ಲಿಗೆ ಹೊರಗಿನಿಂದ ಬರುವ ಯಾತ್ರಾರ್ಥಿಗಳೂ ಸುಂಕದ ಕಿರಿಕಿರಿಯಿಂದ ಬರಲಾಗದ ಸ್ಥಿತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News