ಮಂಗಳೂರು: ಒಂದೂವರೆ ಗಂಟೆಯಲ್ಲಿ ಮೊಬೈಲ್ ಕಳವು ಆರೋಪಿಗಳು ಸೆರೆ

Update: 2020-09-26 16:24 GMT

ಮಂಗಳೂರು, ಸೆ.26: ಬಂದರ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳವು ನಡೆದ ಒಂದೂವರೆ ಗಂಟೆಯಲ್ಲೇ (105) ಮಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಸಬ ಬೆಂಗ್ರೆ ಮುಹಮ್ಮದ್ ಸುಹೈಲ್ (19), ಮುಹಮ್ಮದ್ ಸರ್ಫರಾಜ್ (18), ಮುಹಮ್ಮದ್ ಸಫ್ವಾನ್ (19) ಬಂಧಿತ ಆರೋಪಿಗಳು.
ಕರಂಗಲ್ಪಾಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಮಲಗಿದ್ದಾಗ ಅವರ ಮೊಬೈಲ್‌ಗಳನ್ನು ಕಳವು ಮಾಡಿದ್ದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಶನಿವಾರ ಸಂಜೆ 5 ಗಂಟೆಗೆ ಪೊಲೀಸ್ ಠಾಣೆಯಲ್ಲಿ ಕೂಲಿ ಕಾರ್ಮಿಕರು ಪ್ರಕರಣ ದಾಖಲಿಸಿದ್ದರು.

ತ್ವರಿತಗತಿಯಲ್ಲಿ ತನಿಖೆ ಆರಂಭಿಸಿದ ಮಂಗಳೂರು ಉತ್ತರ ಠಾಣೆಯ ಇನ್‌ಸ್ಪೆಕ್ಟರ್ ಗೋವಿಂದರಾಜು ಬಿ., ಸಬ್ ಇನ್‌ಸ್ಪೆಕ್ಟರ್‌ಗಳಾದ ಗುರುಕಾಂತಿ, ನಾಗರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಭರತ್, ವೆಲೆಂಟೈನ್ ಡಿಸೋಜ, ಕಾನ್‌ಸ್ಟೆಬಲ್ ತಿಪ್ಪ ರಡ್ಡೆಪ್ಪಅವರನ್ನು ಒಳಗೊಂಡ ತಂಡ ಸಂಜೆ 6:45ಕ್ಕೆ ನಗರದ ಲಾಡ್ಜ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದೆ. ಮುಹಮ್ಮದ್ ಸರ್ಫರಾಜ್ ವಿರುದ್ಧ ಈಗಾಗಲೇ ಎರಡು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಕಳವಾದ 11 ಮೊಬೈಲ್‌ಗಳು ಸಹಿತ ಎರಡು ಬೈಕ್‌ಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಆ ಬೈಕ್‌ಗಳ ಮಾಲಕತ್ವದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ವರಿತ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಗೋವಿಂದರಾಜು ಹಾಗೂ ತಂಡದ ಕಾರ್ಯ ಶ್ಲಾಘನೀಯ. ಈ ತಂಡ ತಂತ್ರಜ್ಞಾನದ ಸಹಕಾರ ಹಾಗೂ ಅಪರಾಧ ಪತ್ತೆ ಕೌಶಲವನ್ನು ಬಳಸಿ ಈ ಪ್ರಕರಣವನ್ನು ಕಡಿಮೆ ಸಮಯದಲ್ಲಿ ಭೇದಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News