ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸುವಂತೆ ಆಗ್ರಹಿಸಿ ‘ಮಾತನಾಡು ಉಡುಪಿ ಅಭಿಯಾನ’

Update: 2020-09-26 16:36 GMT

ಉಡುಪಿ, ಸೆ.26: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂಬ ಕೂಗು ಈಗ ಬಲವಾಗಿ ಕೇಳಿ ಬಂದಿದ್ದು, ಯುವಶಕ್ತಿ ಕರ್ನಾಟಕ ಸಂಘಟನೆ ಈ ನಿಟ್ಟಿನಲ್ಲಿ ‘ಮಾತನಾಡು ಉಡುಪಿ ಅಭಿಯಾನ’ವನ್ನು ಹಮ್ಮಿಕೊಂಡಿದೆ.

ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿಯನ್ನೂ ನೀಡಿರುವ ಸಂಘಟನೆ, ಒಂದು ಬೃಹತ್ ಅಭಿಯಾನ ಕೈಗೊಂಡು ಸರಕಾರದ ಮೇಲೆ ಒತ್ತಡ ಹೇರಲು ಸಜ್ಜಾಗಿದೆ.

ಇದರ ಮೊದಲ ಹೆಜ್ಜೆಯಾಗಿ ‘ಮಾತನಾಡು ಉಡುಪಿ ಅಭಿಯಾನ’ವನ್ನು ಸಂಘಟನೆ ಕೈಗೆತ್ತಿಕೊಂಡಿದೆ. ಮಾತನಾಡು ಉಡುಪಿ ಅಭಿಯಾನದ ಮೂಲಕ ಜಿಲ್ಲೆಯ ಗಣ್ಯ ವ್ಯಕ್ತಿಗಳು, ಸಮಾಜಸೇವಕರು ಮತ್ತು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯನಡೆಸುತ್ತಿದೆ. ಇದರ ಅಂಗವಾಗಿ ಈಗಾಗಲೇ ಹಲವು ಗಣ್ಯರು ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲಾ ಆಸ್ಪತ್ರೆಗೆ ನೂತನ ಕಟ್ಟಡ ಹಾಗೂ ಆಧುನಿಕ ವೈದ್ಯೋಪಕರಣದೊಂದಿಗೆ ಶೀಘ್ರವಾಗಿ ಮೇಲ್ದರ್ಜೆಗೆರಿಸಬೇಕೆಂದು ಆಗ್ರಹಿಸಿ ಅಕ್ಟೋಬರ್ 2ರಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಉಪವಾಸ ಸತ್ಯಾಗ್ರಹವನ್ನು ಜಿಲ್ಲೆಯ ಜನತೆ ಮತ್ತು ಹತ್ತು ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯುವಶಕ್ತಿ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದೆ ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷ ಶೀಶ್ ಮಹಮ್ಮದ್ ಹಾಗೂ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News