ಲೆಬನಾನ್: ನಿಯೋಜಿತ ಪ್ರಧಾನಿ ಮುಸ್ತಾಫ ಅದೀಬ್ ರಾಜೀನಾಮೆ

Update: 2020-09-26 17:26 GMT

ಬೈರೂತ್ (ಲೆಬನಾನ್), ಸೆ. 26: ಸರಕಾರ ರಚನೆಯಲ್ಲಿ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿರುವ ಹಿನ್ನೆಲೆಯಲ್ಲಿ, ಲೆಬನಾನ್‌ನ ನಿಯೋಜಿತ ಪ್ರಧಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ. ಅವರು ಒಂದು ತಿಂಗಳ ಹಿಂದೆಯಷ್ಟೇ ಪ್ರಧಾನಿ ಹುದ್ದೆಗೆ ನಿಯೋಜನೆಗೊಂಡಿದ್ದರು.

ದೇಶದಲ್ಲಿನ ಅಪಾಯಕಾರಿ ರಾಜಕೀಯ ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಗಳನ್ನು ನಡೆಸುತ್ತಿರುವ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಪ್ರಯತ್ನಗಳಿಗೆ ಮುಸ್ತಾಫ ಅದೀಬ್ ರಾಜೀನಾಮೆ ನೀಡಿರುವುದು ಭಾರೀ ಹಿನ್ನಡೆಯಾಗಿದೆ.

ಆಗಸ್ಟ್ 4ರಂದು ರಾಜಧಾನಿ ಬೈರೂತ್‌ನಲ್ಲಿರುವ ಬಂದರಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ ಹದಗೆಟ್ಟಿರುವ ಆರ್ಥಿಕತೆಯಿಂದ ದೇಶವನ್ನು ಹೊರಗೆ ತರಲು ಸಂಪುಟದಲ್ಲಿ ಸ್ವತಂತ್ರ ಪರಿಣತರನ್ನು ನೇಮಿಸಿಕೊಳ್ಳುವಂತೆ ಮ್ಯಾಕ್ರೋನ್ ಲೆಬಾನ್‌ನ ರಾಜಕಾರಣಿಗಳನ್ನು ಒತ್ತಾಯಿಸುತ್ತಿದ್ದಾರೆ.

ಅದೇ ವೇಳೆ, ಹಿಝ್ಬುಲ್ಲಾ ಮತ್ತು ಅಮಲ್ ಗುಂಪುಗಳು ಮಹತ್ವದ ಹಣಕಾಸು ಸಚಿವಾಲಯ ತಮಗೆ ಬೇಕೆಂದು ಒತ್ತಡ ಹೇರುತ್ತಿರುವುದರಿಂದ ಅಲ್ಲಿ ಬಿಕ್ಕಟ್ಟು ಏರ್ಪಟ್ಟಿದೆ.

ಶನಿವಾರ ಅಧ್ಯಕ್ಷ ಮೈಕಲ್ ಔನ್‌ರನ್ನು ಭೇಟಿಯಾದ ಬಳಿಕ, ಅದೀಬ್ ರಾಜೀನಾಮೆಯನ್ನು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News