''35 ರೂ. ಟೋಲ್ ಪಾವತಿಸಿ ಪಡುಬಿದ್ರೆಯ ಚಿನ್ನದ ರಸ್ತೆಯನ್ನು ಎಂಜಾಯ್ ಮಾಡಿ!''

Update: 2020-09-27 08:17 GMT

ಪಡುಬಿದ್ರೆ, ಸೆ.27: ''ಹೆಜಮಾಡಿ ಟೋಲ್ ಗೇಟ್‌ನಲ್ಲಿ 35 ರೂ. ಟೋಲ್ ಪಾವತಿಸಿ, ಪಡುಬಿದ್ರೆಯಲ್ಲಿ ಚಿನ್ನದ ರಸ್ತೆಯನ್ನು ಎಂಜಾಯ್ ಮಾಡಿ'' ಹೀಗೊಂದು ಟ್ರೋಲ್ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರ ಎರ್ಮಾಳು-ಪಡುಬಿದ್ರೆ ಕಲ್ಸಂಕ ಕಿರು ಸೇತುವೆಯ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಬೇಸತ್ತ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಈ ರಸ್ತೆ ಕಳೆದ ಇಂಜಿನಿಯರ್ಸ್‌ ದಿನದಂದು ಸಾಕಷ್ಟು ಟ್ರೋಲ್‌ಗೊಳಗಾಗಿದೆ. ''ಕಲ್ಸಂಕದ ಸೇತುವೆ ನಿರ್ಮಾಣದ ಇಂಜಿನಿಯರ್ ಹೊರತು ಮಿಕ್ಕುಳಿದ ಇಂಜಿನಿಯರ್‌ಗಳಿಗೆ ಇಂಜಿನಿಯರ್ಸ್‌ ದಿನದ ಶುಭಾಶಯ'' ಎನ್ನುವ ಟ್ರೋಲ್‌ನಿಂದ ಅಪೂರ್ಣ ಕಾಮಗಾರಿ ಅಪಹಾಸ್ಯಕ್ಕೊಳಗಾಗಿತ್ತು.

ಪಡುಬಿದ್ರೆಯಲ್ಲಿ ಬೈಪಾಸ್, ಪೇಟೆಯಲ್ಲಿ ಹೆದ್ದಾರಿ ವಿಸ್ತರಣೆ ಪರ ವಿರೋಧದ ನಡುವೆ ಹಲವು ವರ್ಷಗಳ ಬಳಿಕ 2015ರಲ್ಲಿ ಈ ಚತುಷ್ಪಥ ಕಾಮಗಾರಿ ಪಡುಬಿದ್ರೆಯಲ್ಲಿ ಆರಂಭಗೊಂಡಿತ್ತು. ಆ ಬಳಿಕ ಪಡುಬಿದ್ರೆಯ ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿಯನ್ನು ಪೇಟೆ ಭಾಗದಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ಬಗ್ಗೆ ಗ್ರಾಮ ಪಂಚಾಯತ್ ಸೇರಿ ಹಲವು ಸಂಘಟನೆಗಳ ಪ್ರತಿಭಟನೆ ಬಳಿಕ ಶೇ.80 ಭಾಗ ಪೂರ್ಣಗೊಂಡಿವೆ. ಅದರಂತೆ ಎರ್ಮಾಳು ಕಲ್ಸಂಕ ಬಳಿ ಕಾಮಿನಿ ಹೊಳೆ ತೋಡಿಗೆ ಅಡ್ಡಲಾಗಿ ನಿರ್ಮಿಸಬೇಕಿದ್ದ ಕಿರು ಸೇತುವೆ ಕಾಮಗಾರಿ 2018ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಐದು ಮುಂಗಾರು ಕಳೆದರೂ ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವಾರ ಸುರಿದ ಭಾರೀ ಮಳೆಗೆ ನವಯುಗ ಕಂಪೆನಿಯ ಅಪೂರ್ಣ ಕಾಮಗಾರಿಯಿಂದ ಹೆದ್ದಾರಿಯ ಬದಿಯ ಗದ್ದೆಯ ನೀರು ತುಂಬಿ ಹೆದ್ದಾರಿಯಲ್ಲಿ ಹರಿದು ಕೃತಕ ನೆರೆ ಉಂಟಾಗಿತ್ತು. ಇದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಹೋರಾಟದ ಎಚ್ಚರಿಕೆ: ನವಯುಗ ಕಂಪೆನಿಯು ಕೂಡಲೇ ಆ ರಸ್ತೆಯನ್ನು ಸರಿಪಡಿಸಿ ಕೊಡಬೇಕು. ಈ ಬಗ್ಗೆ ಸರಕಾರ ಹಾಗೂ ಜಿಲ್ಲಾಡಳಿತ ಕಂಪೆನಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಬೇಕು. ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾದೀತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾಪು ತಾಲೂಕು ಘಟಕದ ಅಧ್ಯಕ್ಷ ಸೈಯದ್ ನಿಝಾಮುದ್ದೀನ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News