ಪ್ರತಿಪಕ್ಷ ಸದಸ್ಯರು ತಮ್ಮ ಸ್ಥಾನಗಳಲ್ಲಿರಲಿಲ್ಲ ಎಂದ ಉಪಸಭಾಪತಿ, ಆದರೆ ರಾಜ್ಯಸಭಾ ಟಿವಿಯಲ್ಲಿ ಕಂಡದ್ದೇ ಬೇರೆ!

Update: 2020-09-27 10:40 GMT

  ಹೊಸದಿಲ್ಲಿ,ಸೆ.27: ಕಳೆದ ರವಿವಾರ ರಾಜ್ಯಸಭೆಯಲ್ಲಿ ಕೋಲಾಹಲದ ನಡುವೆಯೇ ಎರಡು ಕೃಷಿ ಮಸೂದೆಗಳು ಅಂಗೀಕಾರಗೊಳ್ಳುವ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ತಮ್ಮ ಸ್ಥಾನಗಳಿಂದ ಮತವಿಭಜನೆಯ ಬೇಡಿಕೆಯನ್ನು ಮಂಡಿಸಿರಲಿಲ್ಲ ಎಂದು ಹೇಳುವ ಮೂಲಕ ಉಪಸಭಾಪತಿ ಹರಿವಂಶ ಅವರು ತಾನು ಸದ್ರಿ ಬೇಡಿಕೆಯನ್ನು ತಿರಸ್ಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಸದನದಲ್ಲಿ ಕೋಲಾಹಲದ ನಡುವೆಯೇ ಮತವಿಭಜನೆಗೆ ಆಗ್ರಹಿಸಲು ಸದಸ್ಯರು ತಮ್ಮ ಸ್ಥಾನಗಳಲ್ಲಿರಬೇಕು ಎಂದು ಅವರ ಹೇಳುತ್ತಿದ್ದುದು ಟಿವಿಯಲ್ಲಿ ಕಂಡುಬಂದಿತ್ತು. ಆದರೆ ರಾಜ್ಯಸಭಾ ಟವಿಯ ಅಧಿಕೃತ ಪೂಟೇಜ್ ಬೇರೆಯದನ್ನೇ ತೋರಿಸುತ್ತಿದೆ ಎಂದು Indianexpress.com ವರದಿ ಮಾಡಿದೆ.

 ಅಪರಾಹ್ನ ಒಂದು ಗಂಟೆಗೆ ಉಪಸಭಾಪತಿಗಳು ಸದನವನ್ನು 26 ನಿಮಿಷಗಳ ಕಾಲ ವಿಸ್ತರಿಸಿದ್ದರು ಮತ್ತು 1:26ಕ್ಕೆ ಅದನ್ನು 15 ನಿಮಿಷಗಳಿಗೆ ಮುಂದೂಡಿದ್ದರು. ಟಿವಿ ಪ್ರಸಾರದಲ್ಲಿ ಕಂಡು ಬಂದಂತೆ ಒಂದು ಗಂಟೆಯಿಂದ 1:26ರ ನಡುವಿನ ಅವಧಿಯಲ್ಲಿನ ಘಟನಾವಳಿಗಳು ಶಾಸನಬದ್ಧ ಗೊತ್ತುವಳಿಗಳು, ಸೂಚನೆಗಳು ಮತ್ತು ತಿದ್ದುಪಡಿಗಳನ್ನು ಮಂಡಿಸಿದ್ದ ತಿರುಚ್ಚಿ ಶಿವ (ಡಿಎಂಕೆ) ಮತ್ತು ಕೆ.ಕೆ.ರಾಗೇಶ (ಸಿಪಿಎಂ) ಅವರು ಮತವಿಭಜನೆಗೆ ಆಗ್ರಹಿಸಿದಾಗ ತಮ್ಮ ಸ್ಥಾನಗಳಲ್ಲಿಯೇ ಕುಳಿತುಕೊಂಡಿದ್ದನ್ನು ತೋರಿಸಿವೆ.

 ಅಪರಾಹ್ನ ಒಂದು ಗಂಟೆಗೆ ಸದನವನ್ನು ವಿಸ್ತರಿಸಬೇಕೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಮನವಿ ಮಾಡಿಕೊಂಡಾಗ ಉಪಸಭಾಪತಿಗಳು ಮಸೂದೆಯು ವಿಲೇವಾರಿಗೊಳ್ಳುವವರೆಗೆ ಕುಳಿತುಕೊಳ್ಳಲು ಸದನವು ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯರಾದ ಆನಂದ ಶರ್ಮಾ ಮತ್ತು ಜೈರಾಮ ‘ರಮೇಶ’ ಅವರು ಕಲಾಪಗಳನ್ನು ಸೋಮವಾರ ಮುಂದುವರಿಸುವಂತೆ ಆಗ್ರಹಿಸಿದ್ದರು. ಸದನದ ಸಹಮತಿಯನ್ನು ಪಡೆದುಕೊಳ್ಳುವಂತೆ ಅವರು ಮತ್ತು ಶಿವ ಕೋರಿಕೊಂಡಿದ್ದರಾದರೂ ಸಹಮತಿ ಇದೆ ಎಂದು ಹೇಳಿದ್ದ ಉಪಸಭಾಪತಿಗಳು ಮಸೂದೆಗಳ ಮೇಲಿನ ಚರ್ಚೆಗೆ ಉತ್ತರಿಸುವುದನ್ನು ಮುಂದುವರಿಸುವಂತೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಸೂಚಿಸಿದ್ದರು. ಇದನ್ನು ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು ಆಕ್ಷೇಪಿಸಿದ್ದರಾದರೂ ಅದನ್ನು ಕಡೆಗಣಿಸಲಾಗಿತ್ತು. ತನ್ಮಧ್ಯೆ ಸದಸ್ಯರು ಘೋಷಣೆಗಳನ್ನು ಕೂಗುತ್ತ ಸದನದ ಬಾವಿಯ ಬಳಿಗೆ ಧಾವಿಸಿದ್ದರು.

ಅಪರಾಹ್ನ 1:07ಕ್ಕೆ ಉಪಸಭಾಪತಿಗಳು ಶಾಸನಬದ್ಧ ಗೊತ್ತುವಳಿಗಳ ವಿಲೇವಾರಿ ಪ್ರಕ್ರಿಯೆಯನ್ನು ಆರಂಭಿಸಿದ್ದರು ಮತ್ತು ಗೊತ್ತುವಳಿಯನ್ನು ಸಲ್ಲಿಸಿದ್ದ ರಾಗೇಶ ಈ ವೇಳೆ ತನ್ನ ಸ್ಥಾನದಲ್ಲಿದ್ದರು. ಧ್ವನಿಮತದಲ್ಲಿ ಗೊತ್ತುವಳಿ ತಿರಸ್ಕರಿಸಲ್ಪಟ್ಟ ಬಳಿಕ ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂದು ಕೋರಿ ರಾಗೇಶ ಸಲ್ಲಿಸಿದ್ದ ಗೊತ್ತುವಳಿಯನ್ನು ಉಪಸಭಾಪತಿಗಳು ಕೈಗೆತ್ತಿಕೊಂಡಿದ್ದರು ಮತ್ತು ಇದೂ ಧ್ವನಿಮತದಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಇದರ ಬೆನ್ನಿಗೇ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಓ’ಬ್ರಿಯಾನ್ ಮತ್ತು ಶಿವ ಸಲ್ಲಿಸಿದ್ದ ಗೊತ್ತುವಳಿಗಳೂ ತಿರಸ್ಕರಿಸಲ್ಪಟ್ಟಿದ್ದವು. ಈ ವೇಳೆ ಶಿವ ತನ್ನ ಸ್ಥಾನದಲ್ಲಿದ್ದರು. ಮತ ವಿಭಜನೆಗೆ ಕೋರಿದ್ದ ಧ್ವನಿಯೊಂದು ಕೇಳಿಬಂದಿದ್ದು,ಸದಸ್ಯರು ತಮ್ಮ ಸ್ಥಾನಗಳಲ್ಲಿದ್ದು ಮತವಿಭಜನೆಗೆ ಬೇಡಿಕೆಯನ್ನು ಸಲ್ಲಿಸಬೇಕು ಎಂದು ಉಪಸಭಾಪತಿಗಳು ಹೇಳಿದ್ದರು.

ರಾಗೇಶ ಉಪನಿಯಮ 2ಕ್ಕೆ ಸಲ್ಲಿಸಿದ್ದ ತಿದ್ದುಪಡಿಗಳನ್ನು ಕೈಗತ್ತಿಕೊಂಡಾಗಲೂ ಅವರು ತನ್ನ ಸ್ಥಾನದಲ್ಲಿಯೇ ಇದ್ದು ಮತವಿಭಜನೆಗೆ ಆಗ್ರಹಿಸುತ್ತಿದ್ದನ್ನು ಟಿವಿ ಫೂಟೇಜ್‌ಗಳು ಸ್ಪಷ್ಟವಾಗಿ ತೋರಿಸಿವೆ. ಈ ತಿದ್ದುಪಡಿಗಳೂ ಧ್ವನಿಮತದಲ್ಲಿ ತಿರಸ್ಕರಿಸಲ್ಪಟ್ಟಿದ್ದವು.

ಮಸೂದೆಗಳನ್ನು ಆಯ್ಕೆ ಸಮಿತಿಗೆ ಸಲ್ಲಿಸಬೇಕೆಂಬ ತನ್ನ ಗೊತ್ತುವಳಿಯನ್ನು ಉಪಸಭಾಪತಿಗಳು ಕೈಗೆತ್ತಿಕೊಂಡಾಗ ತಾನು ತನ್ನ ಸ್ಥಾನದಲ್ಲಿಯೇ ಇದ್ದೆ ಮತ್ತು ಮತವಿಭಜನೆಗಾಗಿ ಬೊಬ್ಬೆ ಹೊಡೆದಿದ್ದೆ ಎಂದು ಓ’ಬ್ರಿಯಾನ್ ಸುದ್ದಿಸಂಸ್ಥೆಗೆ ತಿಳಿಸಿದರು. ‘ನಾನು ಮತ್ತು ಶಿವ ನಮ್ಮೆಳಗೆ 30 ವರ್ಷಗಳ ಸಂಸದೀಯ ಅನುಭವ ಹೊಂದಿದ್ದೇವೆ. ಗೊತ್ತುವಳಿಗಳನ್ನು ಮಂಡಿಸಿದ್ದ ನಾವು ನಮ್ಮ ಸ್ಥಾನದಲ್ಲಿಯೇ ಇದ್ದೆವು. ಮತವಿಭಜನೆಗಾಗಿ ನಮ್ಮ ಆಗ್ರಹವನ್ನು ಹಲವಾರು ಬಾರಿ ಕಡೆಗಣಿಸಲಾಗಿತ್ತು. ಸಂಸತ್ತಿನ ಕನಿಷ್ಠ ನಾಲ್ಕು ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದರು. ಸದನವನ್ನು ಸೋಮವಾರಕ್ಕೆ ಮುಂದೂಡುವಂತೆ ಪ್ರತಿಪಕ್ಷವೇಕೆ ಕೇಳಿಕೊಂಡಿತ್ತು ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಉತ್ತರಿಸಿದ ರಾಗೇಶ,ಅರ್ಧದಷ್ಟು ರಾಜ್ಯಸಭಾ ಸದಸ್ಯರು ಲೋಕಸಭೆಯಲ್ಲಿದ್ದರಿಂದ ಇಲೆಕ್ಟ್ರಾನಿಕ್ ಮತದಾನ ಸಾಧ್ಯವಿರಲಿಲ್ಲ. ಮತದಾನವನ್ನು ಮತಪತ್ರಗಳ ಮೂಲಕ ಮಾತ್ರ ಮಾಡಲು ಸಾಧ್ಯವಿತ್ತು. ಒಮ್ಮೆ ಹೀಗೆ ಮತದಾನ ನಡೆಸಿದರೂ ಕನಿಷ್ಠ 30 ನಿಮಿಷಗಳು ಬೇಕಾಗುತ್ತವೆ. ಆದ್ದರಿಂದ ಸದನದ ಮುಂದೂಡಿಕೆಗೆ ಆಗ್ರಹಿಸಲಾಗಿತ್ತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News