ಯಕ್ಷ ಭಾಗವತ ಟಿ.ತಿರುಮಲೇಶ್ವರ ಶಾಸ್ತ್ರಿ ನಿಧನ

Update: 2020-09-27 15:06 GMT

ಮಂಗಳೂರು, ಸೆ.27: ತೆಂಕುತಿಟ್ಟಿನ ಹಿರಿಯ ಭಾಗವತ, ತನ್ನದೇ ಶೈಲಿಯ ಹಾಡುಗಾರಿಕೆ ಮೂಲಕ ಯಕ್ಷಪ್ರಿಯರ ಮನ್ನಣೆ ಪಡೆದಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ(77) ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ನಿಧನರಾದರು.

ಸುಮಾರು ಐದು ದಶಕಗಳ ಕಾಲ ವೃತ್ತಿ ಹಾಗೂ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ತಮ್ಮದೇ ವಿಶಿಷ್ಟ ಶೈಲಿಯ ಮೂಲಕ ಪ್ರಸಿದ್ಧ ರಾಗಿದ್ದರು. ತೆಂಕುತಿಟ್ಟಿನ ಹಿರಿಯ ಪರಂಪರೆಯ ಸಾಕ್ಷಿಪ್ರಜ್ಞೆಯಂತಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ಪುತ್ರ ಮುರಲಿಕೃಷ್ಣ ಶಾಸ್ತ್ರೀ ಪ್ರಸಿದ್ಧ ಹವ್ಯಾಸಿ ಭಾಗವತರಾಗಿದ್ದಾರೆ.

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ತೆಂಕಬೈಲಿನ ಚಕ್ರಕೋಡಿ ಮನೆತನದಲ್ಲಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿ, ತಮ್ಮ ಸಂಬಂಧಿಗಳಾದ ರಾಮ ಭಟ್ಟ, ನಾರಾಯಣ ಭಟ್ಟರ ಪ್ರೋತ್ಸಾಹ, ಬೆಂಬಲದಿಂದ ಯಕ್ಷಗಾನ ಭಾಗವತಿಕೆ ಯಲ್ಲಿ ಆಸಕ್ತಿ ತೋರಿ, ಕೊನೆಗೆ ತನ್ನದೇ ಶೈಲಿಯನ್ನು ರೂಪಿಸಿಕೊಂಡಿದ್ದರು. ಪೆರ್ಲದ ಶ್ರೀಪಡ್ರೆಚಂದು ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಅಧ್ಯಾಪಕರಾಗಿ ಹಲವು ಶಿಷ್ಯರನ್ನು ರೂಪಿಸಿದ್ದರು.

ಭಾಗವತರಾಗಿ ಸೊರ್ನಾಡು, ಬಪ್ಪನಾಡು, ಮಧೂರು, ಇರಾ, ಕುಂಟಾರು ಮೇಳಗಳಲ್ಲಿ ದುಡಿದಿದ್ದ ಇವರು, ಹವ್ಯಾಸಿ ಭಾಗವತರಾಗಿಯೇ ಹೆಚ್ಚು ಜನಪ್ರಿಯರಾಗಿದ್ದರು. ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗ 2011ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೇ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ, ಪದ್ಯಾಣ, ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಇವರು ಬಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News