ಎನ್‌ಎಚ್‌ಎಂ ಮುಷ್ಕರ ಏಳನೇ ದಿನಕ್ಕೆ : ಉಡುಪಿಯಲ್ಲಿ 320 ಕೊರೋನ ಪಾಸಿಟಿವ್ ದೃಢ

Update: 2020-09-27 14:35 GMT

ಉಡುಪಿ, ಸೆ. 27: ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಜೀವವಿಮೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಆರು ದಿನಗಳನ್ನು ಪೂರ್ಣಗೊಳಿಸಿ ಏಳನೇ ದಿನಕ್ಕೆ ಕಾಲಿರಿಸಿದೆ.

ಇದೇ ತಿಂಗಳ ಪ್ರಾರಂಭದಲ್ಲಿ ರಾಜ್ಯದ ಸರಕಾರಿ ವೈದ್ಯಾಧಿಕಾರಿಗಳು ಮುಷ್ಕರ ನಡೆಸಿದಾಗ ತಕ್ಷಣವೇ ಅವರೊಂದಿಗೆ ಮಾತುಕತೆ ನಡೆಸಿದ್ದ ರಾಜ್ಯ ಸರಕಾರ, ಎನ್‌ಎಚ್‌ಎಂ ನೌಕರರ ಮುಷ್ಕರ ಆರು ದಿನ ಕಳೆದರೂ ಮಾತುಕತೆ ನಡೆಸಲು ವಿಶೇಷ ಆಸಕ್ತಿಯನ್ನೇ ತೋರಿಸಿಲ್ಲ. ತಮ್ಮ ಬೇಡಿಕೆ ಈಡೇರಿಸದೇ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಮುಷ್ಕರ ನಿರತರು ಹೇಳಿದ್ದಾರೆ.

ಎನ್‌ಎಚ್‌ಎಂ ನೌಕರರ ಮುಷ್ಕರದಿಂದ ಆರನೇ ದಿನವೂ ಕೊರೋನದ ದೈನಂದಿನ ಅಂಕಿಅಂಶಗಳನ್ನೊಳಗೊಂಡ ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಿಸುವ ಬುಲೆಟಿನ್ ಇಂದೂ ಪ್ರಕಟಗೊಂಡಿಲ್ಲ. ಜಿಲ್ಲೆಯಲ್ಲಿ ದೈನಂದಿನ ವರದಿಗೆ ಎನ್‌ಎಚ್‌ಎಂ ನೌಕರರನ್ನೇ ಇಲಾಖೆ ಅವಲಂಬಿಸಿದ್ದು, ಇದರಿಂದ ದಿನದಲ್ಲಿ ದೃಢಪಟ್ಟ ಕೊರೋನ ಪಾಸಿಟಿವ್ ಸಂಖ್ಯೆ, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡವರ ಸಂಖ್ಯೆ ಹಾಗೂ ದಿನದಲ್ಲಿ ಸೋಂಕಿನಿಂದ ಮೃತಪಟ್ಟವರ ಮಾಹಿತಿ ಗಳು ಇಲಾಖೆಯ ಕೈಸೇರುತ್ತಿಲ್ಲ.

ದಿನದಲ್ಲಿ 320 ಪಾಸಿಟಿವ್: ಇಂದು ಪ್ರಕಟಗೊಂಡಿರುವ ರಾಜ್ಯ ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ರವಿ ವಾರ ಒಟ್ಟು 320 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುವುದಾಗಿ ಪ್ರಕಟಿಸಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢ ಪಟ್ಟವರ ಸಂಖ್ಯೆ 16,354ಕ್ಕೇರಿದೆ. ಅಲ್ಲದೇ 122 ಮಂದಿ ಇಂದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಈವರೆಗೆ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ 14,517 ಎಂದು ತಿಳಿಸಿದೆ.

ಜಿಲ್ಲೆಯಲ್ಲಿ ಸದ್ಯ 1693 ಸಕ್ರಿಯ ಪ್ರಕರಣಗಳಿವೆ ಎಂದಿರುವ ಬುಲೆಟಿನ್, ದಿನದಲ್ಲಿ ಒಬ್ಬರು ಮೃತಪಟ್ಟಿರುವುದನ್ನು ದೃಢಪಡಿಸಿದೆ. ಉಸಿರಾಟ ತೊಂದರೆ ಹಾಗೂ ಜ್ವರದಿಂದ ಬಳಲುತಿದ್ದ ಉಡುಪಿಯ 74 ವರ್ಷ ಪ್ರಾಯದ ವೃದ್ಧರು ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದೆ. ಇದರಿಂದ ಜಿಲ್ಲೆುಲ್ಲಿ ಮೃತರ ಸಂಖ್ಯೆ 144ಕ್ಕೇರಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News