ಡ್ರಗ್ಸ್ ಪ್ರಕರಣ: ಮಂಗಳೂರಿನಲ್ಲಿ ಮತ್ತೋರ್ವ ಸೆರೆ

Update: 2020-09-27 14:42 GMT

ಮಂಗಳೂರು, ಸೆ.27: ನಗರದಲ್ಲಿ ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ನಗರ ಅಪರಾಧ ಪತ್ತೆದಳದ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ.

ಸುರತ್ಕಲ್ ಸೂರಿಂಜೆ ನಿವಾಸಿ ಮುಹಮ್ಮದ್ ಶಾಕೀರ್ (35) ಬಂಧಿತ ಆರೋಪಿ. ಈತನಿಂದ ಸುಮಾರು 27 ಸಾವಿರ ರೂ. ಅಧಿಕ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಎಂಡಿಎಂಎ ಸೇವನೆ ಹಾಗೂ ಮಾರಾಟ ಆರೋಪದಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ಎಂಬವರನ್ನು ನಗರ ಸಿಸಿಬಿ ಪೊಲೀಸರು ಸೆ.19ರಂದು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಶಾಕೀರ್ ಇವರಿಗೆ ಮುಂಬೈನಿಂದ ಡ್ರಗ್ಸ್ ತಂದು ಕೊಡುವುದಾಗಿ ಬಾಯಿಬಿಟ್ಟಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ಶಾಕೀರ್‌ನ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತ ಶಾಕೀರ್ ಮುಂಬೈಯಿಂದ ನಿಷೇಧಿತ ಡ್ರಗ್ಸ್ ತಂದು ನಗರದಲ್ಲಿ ಕಿಶೋರ್ ಸಹಿತ ಇತರಿಗೆ ಮಾರಾಟ ಮಾಡುತ್ತಿದ್ದ ಎಂಬ ಆರೋಪವಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಹಾಗೂ ಕೋವಿಡ್ ಪರೀಕ್ಷೆ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಈಗಾಗಲೇ ಮಂಗಳೂರು ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಡ್ಯಾನ್ಸರ್ ಕಿಶೋರ್ ಅಮನ್ ಶೆಟಿ, ಕೊರಿಯಾಗ್ರಫರ್ ತರುಣ್‌ರಾಜ್, ಅಖೀಲ್ ನೌಶೀಲ್ ಹಾಗೂ ಮಣಿಪುರದ ಆಸ್ಕಾ ಎಂಬವರನ್ನು ಬಂಧಿಸಿದ್ದಾರೆ. ಈಗ ಮುಹಮ್ಮದ್ ಶಕೀರ್ ಎಂಬಾತನನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಶಕೀರ್, ತರುಣ್ ರಾಜ್ ಮತ್ತು ಮಣಿಪುರ ಮೂಲದ ಆಸ್ಕಾ ಪೊಲೀಸ್ ಕಸ್ಟಡಿಯಲ್ಲಿದ್ದು, ಉಳಿದವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮತ್ತೆ ಅನುಶ್ರೀ ವಿಚಾರಣೆ ?

ಶನಿವಾರ ನಿರೂಪಕಿ ಅನುಶ್ರೀ ಸಿಸಿಬಿ ಮುಂದೆ ಹಾಜರಾಗಿ ತನಿಖೆ ಎದುರಿಸಿದ್ದಾರೆ. ಬಳಿಕ ನಗರ ಪೊಲೀಸ್ ಕಮಿಷನರ್ ಮುಂದೆಯೂ ಹಾಜರಾಗಿದ್ದರು. ಮಂಗಳೂರು-ಬೆಂಗಳೂರು ನಡುವಿನ ಅನುಶ್ರೀ ಟ್ರಾವಲರ್ ಹಿಸ್ಟರಿಯನ್ನೂ ಕೇಳಿದ್ದು, ಎಷ್ಟು ಬಾರಿ ಬಂದುಹೋಗಿದ್ದಾರೆ ಎಂಬ ಮಾಹಿತಿ ಪಡೆದಿದ್ದಾರೆ. ವಿಚಾರಣೆ ಸಂದರ್ಭ ಅನುಶ್ರೀ ಅವರ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿಲ್ಲ. ಆದರೆ ಯಾರ ಜೊತೆಗೆಲ್ಲ ಅನುಶ್ರೀ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಮೊಬೈಲ್ ನಂಬರ್‌ಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಇದನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಅನುಶ್ರೀ ಅವರನ್ನು ಮತ್ತೆ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡೋಪಿಂಗ್ ಟೆಸ್ಟ್ ಸಾಧ್ಯತೆ?: ಡ್ರಗ್ಸ್ ಪ್ರಕರಣದಲ್ಲಿ ಹೆಸರು ತಳಕು ಹಾಕಿಕೊಂಡು ಸಿಸಿಬಿ ವಿಚಾರಣೆಗೆ ಶನಿವಾರ ಹಾಜರಾಗಿದ್ದ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರನ್ನು ಅಗತ್ಯವಾದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಆಯುಕ್ತ ವಿಕಾಸ್‌ ಕುಮಾರ್ ಸೂಚನೆ ನೀಡಿದ್ದಾರೆ. ಇದೇ ವೇಳೆ ಪೆಡ್ಲರ್ ಸಹಿತ ಬಂಧಿತರಿಂದ ಇನ್ನೂ ಹೆಚ್ಚಿನ ಮಾಹಿತಿ ದೊರೆತಲ್ಲಿ ಅವಶ್ಯವೆನಿಸಿದರೆ, ಡೋಪಿಂಗ್ ಟೆಸ್ಟ್‌ಗೆ ಸಿದ್ಧವಿರುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಬಂಧಿತರು ವಿಚಾರಣೆ ವೇಳೆ ನೀಡುವ ಮಾಹಿತಿಯ ಆಧಾರದಲ್ಲಿ ಅನುಶ್ರೀಗೆ ಡೋಂಪಿಂಗ್ ಟೆಸ್ಟ್ ಅನಿವಾರ್ಯವೇ ಎಂಬುದು ನಿರ್ಧಾರ ವಾಗಬಹುದು ಎನ್ನುತ್ತವೆ ಮೂಲಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News